ಬೆಂಗಳೂರು: ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ.10ಕ್ಕೆ ಮುಂದೂಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದ ಲೋಕಾಯುಕ್ತ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸಿ ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅರ್ಜಿ ಸಲ್ಲಿಸಿದ್ದರು.
ಮುಡಾ ನಿವೇಶನ ಹಂಚಿಕೆ ವೇಳೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಲೇಔಟ್ 3 ಮತ್ತು 4ನೇ ಹಂತದಲ್ಲಿ 14 ನಿವೇಶನಗಳನ್ನು ಪರಿಹಾರವಾಗಿ ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.
ಅವರಿಂದ ಪಡೆದ ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್ 464 ರಲ್ಲಿನ 3.16 ಎಕರೆ ಜಮೀನಿಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ನಿವೇಷನ ಮಂಜೂರು ಮಾಡಲಾಗಿತ್ತು. ಬಳಿಕ ಆ ಪ್ರದೇಶದಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗಿತ್ತು.
ಆದರೆ ಪಾರ್ವತಿ ಅವರಿಂದ ಸ್ವಾಧೀನಪಡಿಸಿಕೊಂಡ ಅಭಿವೃದ್ಧಿಯಾಗದ ಜಮೀನಿಗೆ ಬದಲಾಗಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ 50 ಶೇಕಡಾ ಮಂಜೂರು ಮಾಡಿದೆ. ಆದರೆ ಸ್ವಾಧೀನಪಡಿಸಿಕೊಂಡ ಕೆಸರೆ ಗ್ರಾಮದ ಭೂಮಿಯ ಮೇಲೆ ಪಾರ್ವತಿ ಅವರಿಗೆ ಯಾವುದೇ ಕಾನೂನುಬದ್ಧ ಹಕ್ಕು ಇಲ್ಲ ಎಂದು ಆರೋಪಿಸಲಾಗಿದೆ.