ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅಡೆಪೇಟೆಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮಹಿಳೆಯೋರ್ವರು ಸ್ನಾನದ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಲಕ್ಷ್ಮೀ(25) ಮೃತ ದುರ್ದೈವಿ ಮಹಿಳೆಯಾಗಿದ್ದಾರೆ.
ಲಕ್ಷ್ಮೀ ತನ್ನ ಪತಿಯೊಂದಿಗೆ ಆಂಧ್ರಪ್ರದೇಶದ ತಿರುಪತಿಯಿಂದ ಮಲ್ಲೆಶ್ವರಂಗೆ ಕಾರ್ಯಕ್ರಮಕ್ಕೆಂದು ಆಗಮಿಸಿದ್ದರು. ಮಂಗಳವಾರ ಬೆಳಿಗ್ಗೆ ಸಂಬಂಧಿಕರ ಮನೆಯಲ್ಲಿ ಸ್ನಾನಕ್ಕೆಂದು ಹೋಗಿದ್ದ ವೇಳೆ ಬಾತ್‌ರೂಂ ನಲ್ಲೇ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ವೇಳೆ ಮನೆಯಲ್ಲಿ ಕುಟುಂಬಸ್ಥರೂ ಸಹ ಇದ್ದು ಮೃತ ಲಕ್ಷ್ಮೀ ಮುಖದ ಮೇಲೆ ಗಾಯದ ಗುರುತುಗಳು ಕಂಡುಬಂದಿರುವುದು ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಗಿದೆ.
ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಇಲ್ಲವಾಗಿದ್ದು, ಮಹಿಳೆ ಬಕೆಟ್‌ನಲ್ಲಿ ನೀರನ್ನೂ ಸಹ ತುಂಬಿಸಿರಲಿಲ್ಲ. ಆದರೂ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮಹಿಳೆ ಸಾವು ಹೇಗೆ ಸಂಭವಿಸಿದೆ ಅನ್ನೋದೇ ಕೌತುಕದ ವಿಷಯವಾಗಿದೆ.
ನೆಲಮಂಗಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.