ಜೋಯಿಡಾ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಕ್ಯಾನ್ಸರ್ ನೀಡಿರುವ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಹೇಳಿಕೆ ಅವೈಜ್ಞಾನಿಕವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ದಾನಗೇರಿ ಹೇಳಿದರು.
ಅವರು ನಂದಿಗದ್ದಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಸಭಾಭವನದಲ್ಲಿ ಮಾತನಾಡುತ್ತಾ ಅಡಿಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿ ಸುಳ್ಳು ಎಂಬುದು ನನ್ನ ಅಭಿಪ್ರಾಯವಾಗಿದೆ. ಕ್ಯಾಂಪ್ಕೋ ಹಾಗೂ ಇನ್ನಿತರೆ ಸಂಸ್ಥೆಗಳು ಈಗಾಗಲೇ ಅಡಿಕೆ ಬಗ್ಗೆ ಸಂಶೋಧನೆ ಮಾಡಿ ಅಡಕೆಯಲ್ಲಿ ಯಾವುದೇ ಕ್ಯಾನ್ಸರ್ ಕಾರಕ ಗುಣಗಳು ಇಲ್ಲ ಎಂದು ವರದಿ ನೀಡಿದೆ.
ಅಡಕೆಯಲ್ಲಿ ಅನೇಕ ಔಷಧಿ ಗುಣಗಳಿವೆ. ತಂಬಾಕು ಕ್ಯಾನ್ಸರ್ ಕಾರಕ ಎಂಬುದು ಹೌದು, ತಂಬಾಕು ಬೆರೆಸದ ಅಡಿಕೆ ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಹಾನಿ ಉಂಟು ಮಾಡುವುದಿಲ್ಲ. ಯಾವುದೇ ಸಮಾರಂಭ ಇದ್ದರೂ ಊಟದ ನಂತರ ಅಡಿಕೆ ಎಲೆ ಕೊಡುವುದು ನಮ್ಮ ಭಾರತೀಯರ ಸಂಪ್ರದಾಯ, ಅಡಿಕೆ ಮಾರುಕಟ್ಟೆ ಹಾಳು ಮಾಡಲು ಅಪಪ್ರಚಾರ ಮಾಡಲಾಗುತ್ತಿದೆ. ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ದಾನಗೇರಿ ಹೇಳಿದ್ದಾರೆ.