ಯಲ್ಲಾಪುರ: ಸುಂದರ ಪರಿಸರದ ನಡುವೆ ನಿರ್ಮಾಣವಾಗುತ್ತಿರುವ ನೂತನ ಶಿಲಾಮಯ ದತ್ತ ಮಂದಿರ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅಮೃತ ಹಸ್ತದಿಂದ ಡಿ. 14 ರಂದು ದತ್ತ ಜಯಂತಿಯಂದೇ ಲೋಕಾರ್ಪಣೆಗೊಳ್ಳಲಿದೆ.
ಪಟ್ಟಣದ ನಾಯ್ಕನಕೆರೆಯ ನೂತನ ಶಿಲಾಮಯ ದತ್ತ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದ ದತ್ತ ಮಂದಿರ ಲೋಕಾರ್ಪಣಾ ಸಮಿತಿ ಗೌರವಾಧ್ಯಕ್ಷ ಶಾಸಕ ಶಿವರಾಮ ಹೆಬ್ಬಾರ್, ರಾಜ್ಯದಲ್ಲೇ ಈ ಮಂದಿರ ಹೆಸರು ಗಳಿಸುವುದರಲ್ಲಿ ಸಂಶಯವಿಲ್ಲ. ನಮ್ಮೂರು ಬೆಳೆಯಬೇಕು ಎನ್ನುವ ಆಶಯಕ್ಕೆ ಮಂದಿರ ಪುಷ್ಠಿ ನೀಡಲಿದೆ. ದತ್ತನ ಸನ್ನಿಧಾನಕ್ಕಾಗಿ ಭಕ್ತರು ಗಾಣಗಾಪುರಕ್ಕೆ ತೆರಳುತ್ತಿದ್ದರು. ಮುಂದಿನ ದಿನಗಳಲ್ಲಿ ಗಾಣಗಾಪುರದ ಜನರೇ ಈ ಮಂದಿರಕ್ಕೆ ಭೇಟಿ ನೀಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಭವ್ಯ ನಿಸರ್ಗದ ಮಡಿಲಲ್ಲಿ ಶ್ರೀ ಬ್ರಹ್ಮಾನಂದ ಗಣೇಶ ಯೋಗಿಗಳು ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಿರುವ ಸದ್ಗುರು ಶ್ರೀ ದತ್ತಾತ್ರೇಯ ಮೂರ್ತಿಗೆ 3 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಮಂದಿರವನ್ನಾಗಿ ಪುನರ್ ನಿರ್ಮಾಣ ಮಾಡುವುದರ ಜೊತೆಗೆ ಶ್ರೀಗುರು ದತ್ತಾತ್ರೇಯರ ಹೊಸ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ಕೆ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪಿಸಿ, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಮೊದಲ ಹಂತ ಗರ್ಭಗುಡಿಯ ಲೋಕಾರ್ಪಣಾ ಕಾರ್ಯಕ್ರಮ ಡಿ.13 ರಿಂದ 15 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಭಕ್ತರು ತನು, ಮನ, ಧನ ಸಹಾಯದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಶಿವರಾಮ ಹೆಬ್ಬಾರ್ ವಿನಂತಿಸಿದರು.