ಧಾರವಾಡ: ಅನುಮಾನಾಸ್ಪದವಾಗಿ ಮೃತಪಟ್ಟು ಅಂತ್ಯಸಂಸ್ಕಾರ ಮಾಡಿದ ಮಗುವಿನ ಶವವನ್ನು ಗುರುವಾರ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರುನಲ್ಲಿ ನಡೆದಿದೆ.
ಗ್ರಾಮದ ವೆಂಕಪ್ಪ ಮತ್ತು ಶಾಂತಾ ಮರಿಸಿದ್ದಣ್ಣವರ ದಂಪತಿ ಮಗ ಯಲ್ಲಪ್ಪ (3) ನ. 8ರಂದು ಮನೆಯ ಹಿತ್ತಲ ಬಳಿ ಆಟವಾಡಲು ಹೋದಾಗ ಕಬ್ಬಿಣದ ವಸ್ತು ಬಡಿದು ಮೃತಪಟ್ಟಿದ್ದಾನೆ ಎಂದು ಮನೆ ಅಕ್ಕಪಕ್ಕದವರು ಹೇಳಿದ್ದರಿಂದ ಪಾಲಕರು ಅದನ್ನೇ ನಂಬಿದ್ದರು. ಬಳಿಕ ಮಗುವಿನ ಅಂತ್ಯಸಂಸ್ಕಾರವನ್ನು ಸಹ ನೆರವೇರಿಸಿದ್ದರು. ಆದರೆ, ಮಂಗಳವಾರ ಮನೆಯ ಪಕ್ಕದ ಯುವಕ ನಾಗಲಿಂಗ ಎಂಬಾತ ಈ ಘಟನೆ ನಡೆದ ಬಳಿಕ ಕಾಣೆಯಾಗಿರುವುದನ್ನು ಗಮನಿಸಿದ ಶಾಂತಾ, ತಮ್ಮ ಮಗುವನ್ನು ಮನೆಯ ಅಕ್ಕಪಕ್ಕದವರೇ ಕೊಲೆ ಮಾಡಿದ್ದಾರೆಂದು ಅನುಮಾನಗೊಂಡು ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಹೀಗಾಗಿ ತಾಲೂಕು ದಂಡಾಧಿಕಾರಿ ಸುಧೀರ್ ಸಾಹುಕಾರ, ಪಿಎಸ್‌ಐ ಜನಾರ್ದನ ಬಿ. ಭೇಟಿ ನೀಡಿ ಸ್ಮಶಾನದಲ್ಲಿ ಹೂತಿರುವ ಮಗವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ವರದಿ ಬರಲು ಹತ್ತು ದಿನ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ನಾಪತ್ತೆಯಾಗಿರುವ ನಾಗಲಿಂಗ ಮಾತ್ರ ಈ ವರೆಗೂ ಎಲ್ಲಿದ್ದಾನೆ ಎಂಬುದು ತಿಳಿದು ಬಂದಿಲ್ಲ. ವರದಿ ಬಂದ ಬಳಿಕ ಇದು ಕೊಲೆಯೂ ಅಥವಾ ಆಕಸ್ಮಿಕವಾಗಿ ನಡೆದ ಘಟನೆಯೂ ಎಂಬ ಸತ್ಯಾಸತ್ಯತೆ ತಿಳಿದು ಬರಬೇಕಿದೆ. ಇತ್ತ ಆ ಯುವಕ ನಾಪತ್ತೆಯಾಗಿರುವುದು ಸಹ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.