ಬಾಗಲಕೋಟೆ: ಜಿಲ್ಲೆಯ ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆರೆ ಹಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಪಟ್ಟಣದಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರಿದ್ದ ಸ್ಥಳದಲ್ಲಿಯೇ ಹಾವು ಕಾಣಿಸಿಕೊಂಡಿದ್ದು, ಜನರು ಕಂಗಾಲಾಗಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಇಬ್ರಾಹಿಂ ಅತ್ತಾರ್ ಎನ್ನುವ ವ್ಯಕ್ತಿ ಹಾವನ್ನು ಸೆರೆಹಿಡಿದಿದ್ದು, ಅದನ್ನು ಕೊರಳಲ್ಲಿ ಸುತ್ತಿಕೊಂಡು ಜನರಿಗೆ ಪ್ರದರ್ಶನ ಮಾಡಿದ್ದಾನೆ. ಕೆರೆ ಹಾವು ವಿಷಕಾರಿಯಲ್ಲದಿರುವುದರಿಂದ ಇಬ್ರಾಹಿಂ ಹಾವು ಹಿಡಿದು ಜನರಿಗೆ ಪ್ರದರ್ಶಿಸಿದ್ದು, ಜನರು ಗಾಬರಿಯಿಂದಲೇ ವೀಕ್ಷಿಸಿದ್ದಾರೆ. ಜೊತೆಗೆ ಕೆಲವರು ತಮ್ಮ ಮೊಬೈಲ್‌ನಲ್ಲಿ ಹಾವು ಸೆರೆಹಿಡಿದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.
ಬಳಿಕ ಹಾವನ್ನು ಚೀಲದಲ್ಲಿ ಹಾಕಿ ಸುರಕ್ಷಿತವಾಗಿ ಕಟ್ಟಿದ್ದು, ಹಾವು ಸೆರೆಯಾದ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಹಾವು ಕಂಡೊಡನೇ ಕಕ್ಕಾಬಿಕ್ಕಿಯಾಗಿ ದಿಕ್ಕಾಪಾಲಾಗಿ ಓಡಿದ ಜನರು ಬಳಿಕ ನಿರಾಳರಾಗಿ ಮಾರುಕಟ್ಟೆಯಲ್ಲಿ ತಮ್ಮ ಕಾರ್ಯ ಮುಂದುವರೆಸಿದ್ದಾರೆ.