ಕುಮಟಾ: ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿ ಓರ್ವನಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ರಾಮಲೀಲಾ ಆಸ್ಪತ್ರೆ ಬಳಿ ನಡೆದಿದೆ. ಮೃತ ಪಾದಚಾರಿಯನ್ನು ನಾಗು ಬಾಳಾ ಮುಕ್ರಿ(68) ಎಂದು ಗುರುತಿಸಲಾಗಿದೆ.
ತಾಲ್ಲೂಕಿನ ಧಾರೇಶ್ವರ ಮೂಲದವನಾಗಿದ್ದ ನಾಗು ಮುಕ್ರಿ, ಸದ್ಯ ಹೆಗಡೆ ಗ್ರಾಮದಲ್ಲಿ ವಾಸವಾಗಿದ್ದ. ರಾತ್ರಿ ಪಟ್ಟಣದ ಹೆದ್ದಾರಿ ಮೇಲೆ ನಡೆದು ಹೋಗುತ್ತಿದ್ದ ವೇಳೆ ದೀವಗಿ ಕಡೆಯಿಂದ ಕುಮಟಾದತ್ತ ಆಗಮಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ.
ಡಿಕ್ಕಿ ರಭಸಕ್ಕೆ ಪಾದಚಾರಿ ನಾಗು ಮುಕ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಅಂಬ್ಯುಲೆನ್ಸ್ ಮೂಲಕ ಶವವನ್ನು ಕುಮಟಾ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.