ಮುಂಬೈ: ಇನ್ನು 10 ದಿನಗಳೊಳಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ಬಾಬಾ ಸಿದ್ದಿಕಿಯ ರೀತಿಯಲ್ಲಿ ಹತ್ಯೆ ಮಾಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ ಮಹಿಳೆಯನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಹಿಳೆಯನ್ನು ಥಾಣೆ ಜಿಲ್ಲೆಯ ಸಮೀಪದ ಉಲ್ಲಾಸನಗರ ನಿವಾಸಿ ಫಾತಿಮಾ ಖಾನ್ ಎಂದು ಗುರುತಿಸಲಾಗಿದೆ. ಯೋಗಿ ಆದಿತ್ಯನಾಥ್ ಅವರು ಮುಂದಿನ 10 ದಿನಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಅವರನ್ನು ಎನ್ಸಿಪಿ ನಾಯಕ ಬಾಬಾ ಸಿದ್ದಿಕಿಯವರನ್ನು ಕೊಂದಂತೆ ಹತ್ಯೆ ಮಾಡಲಾಗುತ್ತದೆ ಎಂಬ ಸಂದೇಶವನ್ನು ಅಪರಿಚಿತ ಸಂಖ್ಯೆಯಿಂದ ಮುಂಬೈ ಸಂಚಾರ ಪೊಲೀಸರಿಗೆ ಶನಿವಾರ ಕಳಿಸಲಾಗಿತ್ತು. ತನಿಖೆ ವೇಳೆ ಇದನ್ನು ಕಳಿಸಿದಾಕೆ ಫಾತಿಮಾ ಎಂಬುದು ಪತ್ತೆಯಾಗಿದೆ.
ಉಲ್ಲಾಸನಗರದ ಪೊಲೀಸರು ಹಾಗೂ ಮುಂಬೈನ ಭಯೋತ್ಪಾದನಾ ನಿಗ್ರಹ ದಳ ಒಟ್ಟಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಆದರೆ, ಫಾತಿಮಾ ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಪದವೀಧರೆಯಾಗಿದ್ದು, ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಯೋಗಿ ನ.20ರಂದು ರಾಜ್ಯಕ್ಕೆ ಆಗಮಿಸಲಿದ್ದು, ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರ ಭದ್ರತೆಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.