ಬಳ್ಳಾರಿ: ಚಾಲುಕ್ಯರ ಕಾಲದ ದೇವಸ್ಥಾನಗಳು, ಮಠಗಳನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅಂದರೆ ಭಾರತದಲ್ಲಿ ವಕ್ಫ್ ಮೊದಲೋ, ಅಥವಾ ಚಾಲುಕ್ಯರು ಮೊದಲೋ ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಪುರ ಜಿಲ್ಲೆಯ ಪಡಗನೂರು ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ಕಟ್ಟಿದ ಸೋಮೇಶ್ವರ ದೇವಸ್ಥಾನವಿದೆ. ಇವತ್ತಿಗೂ ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಈ ದೇವಸ್ಥಾನದ 57 ಎಕರೆ ಜಮೀನನ್ನು ವಕ್ಫ್‌ಗೆ ಸೇರಿಸಲಾಗಿದೆ. ಸಿಂದಗಿಯಲ್ಲಿ 12ನೇ ಶತಮಾನದಲ್ಲಿ ಕಟ್ಟಿದ ವಿರಕ್ತಮಠ ಹಾಗೂ ಮಠದ ಆಸ್ತಿಯನ್ನು ವಕ್ಫ್‌ಗೆ ಸೇರಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಭೂಮಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ರೈತರ, ದೇವಸ್ಥಾನ, ಮಠಗಳ ಭೂಮಿಯನ್ನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ಕಳೆದ 2023ರ ಜೂನ್ 23ರಂದು ನೀಡಿದ ಆದೇಶದಲ್ಲಿ ವಕ್ಫ್ ಆಸ್ತಿ ತನ್ನದೆಂದು ಹೇಳಲು ಪೂರಕ ದಾಖಲೆ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ನಾವು ಸಹ ಅದನ್ನೇ ಒತ್ತಾಯ ಮಾಡುತ್ತಿದ್ದೇವೆ. ರಾಜ್ಯದಲ್ಲಿರುವ ಎಲ್ಲ ವಕ್ಫ್ ಆಸ್ತಿಯ ಮೂಲ ದಾಖಲೆಗಳನ್ನು ಬಹಿರಂಗಪಡಿಸಬೇಕು. ನಮ್ಮ ಪಿತಾರ್ಜಿತ ಆಸ್ತಿಗೆ ಯಾರೋ ಮಾಲೀಕರಾಗಲು ಬಿಡಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಮೋಸಗಾರ:
ಸಿಎಂ ಸಿದ್ದರಾಮಯ್ಯ ಮಹಾ ಮೋಸಗಾರ. ಒಳಮೀಸಲಾತಿ ಜಾರಿಗೆ ಇಲ್ಲಸಲ್ಲದ ಸುಳ್ಳು ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ನೀಡಿದ ಬಳಿಕ ಒಳ ಮೀಸಲಾತಿ ಜಾರಿಗೆ ಸಿಎಂ ಹಿಂದೇಟು ಹಾಕುತ್ತಿರುವುದೇಕೆ?. ನುಡಿದಂತೆ ನಡೆಯುವ ಸರ್ಕಾರವೆಂದು ಹೇಳುವ ಸಿದ್ದರಾಮಯ್ಯ ಅವರು ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.