ಗೋಕರ್ಣ: ಪ್ರವಾಸಕ್ಕೆಂದು ಬಂದಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ನಾಲ್ವರು ಅಸ್ವಸ್ಥಗೊಂಡ ಘಟನೆ ಗೋಕರ್ಣದ ರಾಮತೀರ್ಥ ಬಳಿ ನಡೆದಿದೆ. ಓರ್ವ ವಿದೇಶಿಗ ಸೇರಿ ದೆಹಲಿ ಮೂಲದ ಮೂವರು ಪ್ರವಾಸಿಗರು ಗಾಯಗೊಂಡವರು. ಫ್ರಾನ್ಸ್ ಅಲೆಕ್ಸಿಸ್ ಜರ್ರಿ(36) ಜೇನು ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಿ ಪ್ರವಾಸಿಗ.
ಓರ್ವ ವಿದೇಶಿ ಪ್ರವಾಸಿಗ ಹಾಗೂ ಮೂವರು ದೆಹಲಿ ಮೂಲದ ವ್ಯಕ್ತಿಗಳು ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ರಾಮತೀರ್ಥ ಪಕ್ಕದ ಗುಡ್ಡದ ಬಳಿ ನಾಲ್ವರೂ ಚಾರಣಕ್ಕೆಂದು ತೆರಳಿದ್ದು, ಈ ವೇಳೆ ಜೇನುಹುಳುಗಳು ಏಕಾಏಕಿ ದಾಳಿ ನಡೆಸಿವೆ. ಜೇನು ದಾಳಿಯಿಂದ ಅಸ್ವಸ್ಥಗೊಂಡಿದ್ದವರನ್ನು ಜೊತೆಗಿದ್ದ ಉತ್ತರಭಾರತ ಭಾಗದ ಪ್ರವಾಸಿಗರು ಕರೆತಂದು ಗೋಕರ್ಣದ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಜೇನುಹುಳಗಳ ದಾಳಿಯಿಂದ ಕಡಿತಕ್ಕೊಳಗಾದವರು ವಿಪರೀತ ವಾಂತಿ ಮಾಡಿಕೊಳ್ಳುತ್ತಿದ್ದು, ಅಂಕೋಲಾ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಚಿಕಿತ್ಸೆ ನೀಡಿದ್ದು ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದೇಶಿ ಪ್ರಜೆ ವೃತ್ತಿಯಲ್ಲಿ ಉಪನ್ಯಾಸಕರು ಎನ್ನಲಾಗಿದ್ದು, ದೆಹಲಿಯ ಮೂವರು ಸಹೋದ್ಯೋಗಿಗಳೊಂದಿಗೆ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು ಎನ್ನಲಾಗಿದೆ.