ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ 7 ಅಪರಾಧಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟೂ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶ ಸಂತೋಷ ಗಜಾನನ ಭಟ್ 5 ಪ್ರಕರಣಗಳಿಗೆ ಸೇರಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಕಳೆದ 2009 ರಿಂದ 2010ರ ಅವಧಿಯಲ್ಲಿ ಬೇಲೇಕೇರಿ ಬಂದರಿನಲ್ಲಿ ಸಂಗ್ರಹಿಸಲಾಗಿದ್ದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ರವಾನಿಸಿದ ಆರೋಪದ ಮೇಲೆ 2013ರಲ್ಲಿ ಸಿಬಿಐ ಪ್ರತ್ಯೇಕವಾಗಿ ಒಟ್ಟೂ 5 ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಶಾಸಕ ಸತೀಶ್ ಸೈಲ್ ಹಾಗೂ ಅವರ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿ, ಅಂದಿನ ಅರಣ್ಯಾಧಿಕಾರಿಯಾಗಿದ್ದ ಮಹೇಶ ಬಿಳಿಯೆ, ಖಾರದಪುಡಿ ಮಹೇಶ, ಆಶಾಪುರ ಮೈನಿಂಗ್, ಮಹೇಶ್ವರ ಮಿನರಲ್ಸ್ ಸೇರಿದಂತೆ 7 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಸುದೀರ್ಘ ವಿಚಾರಣೆ ಬಳಿಕ ಕೊನೆಗೂ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ.
1ನೇ ಕೇಸ್‌ನಲ್ಲಿ ಅಪರಾಧಿಗಳಿಗೆ 6 ಕೋಟಿ ದಂಡ, 2ನೇ ಕೇಸ್‌ನಲ್ಲೂ ಶಾಸಕ ಸೈಲ್‌ಗೆ 5 ವರ್ಷ ಶಿಕ್ಷೆಯಾಗಿದ್ದು, 3ನೇ ಕೇಸ್‌ನಲ್ಲೂ ಕಳ್ಳತನ ಕೇಸ್‌ನಲ್ಲಿ 3 ವರ್ಷ ಶಿಕ್ಷೆಯಾಗಿದೆ. 4ನೇ ಕೇಸ್‌ನಲ್ಲಿ ಒಳಸಂಚು ಆರೋಪದಲ್ಲಿ 5 ವರ್ಷ ಶಿಕ್ಷೆಯಾಗಿದ್ದು, 5ನೇ ಕೇಸ್‌ನಲ್ಲೂ 5 ವರ್ಷ ಶಿಕ್ಷೆ, 6ನೇ ಕೇಸ್‌ನಲ್ಲಿ ವಂಚನೆ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಸೈಲ್ ಗುರಿಯಾಗಿದ್ದಾರೆ. 6 ಪ್ರಕರಣಗಳಿಗೂ ಸೇರಿದಂತೆ ಶಾಸಕ ಸತೀಶ್ ಸೈಲ್‌ಗೆ ಒಟ್ಟೂ 44 ಕೋಟಿಯಷ್ಟು ದಂಡವನ್ನು ವಿಧಿಸಿದ್ದು, ದಂಡದ ಹಣವನ್ನು ಜಪ್ತು ಮಾಡಿಕೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ.
ಇದೀಗ ಜಾರಿಯಾಗಿರುವ ಶಿಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸತೀಶ್ ಸೈಲ್‌ಗೆ ಅವಕಾಶವಿದೆ. ಮೇಲ್ಮನವಿಗೆ ಅವಕಾಶ ಇರುವುದು ಕೊನೆಯ ಅವಕಾಶವಾಗಿದ್ದು, ಹೈಕೋರ್ಟ್‌ನಲ್ಲಿ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ವಿಧಿಸಿದ ಶಿಕ್ಷೆಗೆ ತಡೆ ಸಿಕ್ಕರೆ ಮಾತ್ರ ಬಚಾವಾಗುವುದು ಸಾಧ್ಯವಾಗಲಿದ್ದು ಇಲ್ಲವಾದಲ್ಲಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾದ ಭೀತಿ ಸತೀಶ್ ಸೈಲ್‌ಗೆ ಎದುರಾಗಿದೆ.