ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಅ.24ರಂದು (ಇಂದು) ಮಧ್ಯಾಹ್ನ 12 ಗಂಟೆಗೆ ತೆರೆಯಲಾಗುವುದು. ನ.3ರವರೆಗೂ ಜಾತ್ರೆ ಜರುಗಲಿದ್ದು, 9 ದಿನ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಸಿದ್ದಗಂಗಾ, ಆದಿಚುಂಚನಗಿರಿ ಸ್ವಾಮೀಜಿಗಳ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲನ್ನು ತೆಗೆಯಲಿದ್ದು, ನ.3ರ ಮಧ್ಯಾಹ್ನ 12ಗಂಟೆಗೆ ಶಾಸ್ರೋಕ್ತವಾಗಿ ಪುನಃ ಮುಚ್ಚಲಾಗುವುದು. ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಆದ್ದರಿಂದ ಸುಮಾರು 20 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ಲಡ್ಡು ಪ್ರಸಾದ ವಿತರಣೆ:
ದಿನದ 24 ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದರ್ಶನಕ್ಕೆ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು. ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಮೂಲಭೂತ ಸೌಕರ್ಯಗಳಾದ ನೆರಳು, ಜರ್ಮನ್ ಟೆಂಟ್, ಬ್ಯಾರಿಕೇಡ್, ಫ್ಯಾನ್, ನೀರು ಹಾಗೂ ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಕ್ಕೆ ದೀಪಾಲಂಕಾರ ಮಾಡಲಾಗಿದ್ದು, ಪಟ್ಟಣದ ಸಿಲ್ವರ್ ಜುಬಿಲಿ ಪಾರ್ಕ್ ಆವರಣದಲ್ಲಿ ಅ.26 ರಿಂದ 29ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.