ಬೆಂಗಳೂರು: ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ, ಬಿಜೆಪಿ ಸಂಸದ ಬಿ.ವೈ.ವಿಜಯೇಂದ್ರ ಮಾತಿಗೆ ಟಕ್ಕರ್ ಕೊಡುವ ಭರದಲ್ಲಿ ‘ಬಿಜೆಪಿ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ’ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎಂದು ಆರೋಪಿಸಿದ ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆಗೆ ಮಾದ್ಯಮಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಕರಪ್ಶನ್ ಪಾರ್ಟಿ ಎಂದು ಕರೆಯುವ ಸಂಸದರೇ, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಹಾಗೂ NDA ಮೈತ್ರಿಕೂಟದ ಜೆಡಿಎಸ್ನ ಹೆಚ್.ಡಿ.ಕುಮಾರಸ್ವಾಮಿ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಕ್ಕೆ ಕಾರಣ ಏನು? ಅನ್ನೋದನ್ನು ಬಿಜೆಪಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ನಿಮ್ಮದೇ ಪಕ್ಷದ ನಾಯಕರುಗಳ ಮೇಲೆ ಪೋಕ್ಸೋ ಪ್ರಕರಣಗಳಿದ್ದು, ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ, ಪುರುಷರ ಮೇಲೂ ಅತ್ಯಾಚಾರ ನಡೆದಿದೆ. ನಿಮ್ಮ ಪಕ್ಷದ ಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುನಿರತ್ನ ಪ್ರಕರಣದ ವಿಚಾರವಾಗಿ ಪ್ರಸ್ತಾಪಿಸಿದ ಆಯನೂರು ಮಂಜುನಾಥ, ಮುನಿರತ್ನನ ವಿರುದ್ಧ ಬಿಜೆಪಿಯ ಯಾವೊಬ್ಬ ನಾಯಕರೂ ಮಾತನಾಡುವುದಿಲ್ಲ. ಅವನು ಅತ್ಯಾಚಾರ ಮಾಡುತ್ತಾನೆ, ಏಡ್ಸ್ ಹರಡಿಸುತ್ತಾನೆ, ಅವನ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ? ನಿಮಗೆ ಏನಾದರೂ ಭಯವಿದೆಯಾ?. ಭ್ರಷ್ಟಾಚಾರದ ಹಾದಿಯಲ್ಲೇ ಬಂದಿರುವ ನೀವು ಕಾಂಗ್ರೆಸ್ ಬಗ್ಗೆ ಮಾತನಾಡುವ ಮುನ್ನ ಯೋಚಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು, ಮೂರನೇ ಬಾರಿಗೆ ಅಧಿಕಾರ ನಡೆಸಲಾಗದೇ ರಾಜೀನಾಮೆ ನೀಡುವಂತಾಗಿದ್ದು ಭ್ರಷ್ಟಾಚಾರದ ಕಾರಣದಿಂದಲೇ. ಸಾವಿರಾರು ಕೋಟಿ ರೂಗಳ ಬೇನಾಮಿ ಆಸ್ತಿಗಳನ್ನು, ಟ್ರಸ್ಟ್ಗಳ ಹೆಸರಿನಲ್ಲಿ ನೋಂದಾಯಿಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಿ.ವೈ.ರಾಘವೇಂದ್ರ ಯತ್ನಿಸಿದ್ದಾರೆ. ಇಲ್ಲ ಎಂದಾದಲ್ಲಿ ಹಣದ ಮೂಲವನ್ನು ಪ್ರಕಟ ಮಾಡಿ ಎಂದು ಆಯನೂರು ಸವಾಲು ಹಾಕಿದ್ದಾರೆ.
ಬಿ.ಎಸ್.ಯಡಿಯೂರಪ್ಪ ತಮ್ಮ ಹಾಗೂ ಕುಟುಂಬದ ಭ್ರಷ್ಟಾಚಾರದ ಕಾರಣದಿಂದ ಅಧಿಕಾರದಿಂದ ಹೈಕಮಾಂಡ್ ಕೆಳಗಿಳಿಸುವಂತೆ ಮಾಡಿಕೊಂಡಿದ್ದಾರೆ. ಇಂತಹವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತುಗಳು ಕೇಳಿಬಂದಿರುವುದು ಸ್ವಾಗತಾರ್ಹ ಎಂದು ಟೀಕಿಸಿದ್ದಾರೆ.