ಕಲಬುರಗಿ: ರಾಜ್ಯದ ಪ್ರತಿ ತಾಲೂಕಿನಲ್ಲಿ ಮನೆ ಇಲ್ಲದ ಬಡ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಮಂಡಳಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಪ್ರಸ್ತಾವನೆ ಯಲ್ಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಿಂಟೆಜ್ ಪ್ಯಾಲಸ್ ನಲ್ಲಿ ಆಯೋಜಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಗಳ ವಖ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಮುದಾಯದಲ್ಲಿ ಅತ್ಯಂತ ಬಡವರಿದ್ದು ಅಂತಹ ವಸತಿ ರಹಿತರ ಸಮೀಕ್ಷೆ ನಡೆಸಿ ಅವರಿಗೆ ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುವುದು.
ಇದರಿಂದ ಮಂಡಳಿಗೂ ಆದಾಯ ಬರುವಂತಾಗುತ್ತದೆ, ಸಮುದಾಯಕ್ಕೂ ಒಳಿತಾಗುತ್ತದೆ ಎಂದು ಹೇಳಿದರು. ಇದಲ್ಲದೆ ಮೌಜನ್ ಹಾಗೂ ಇಮಾಮ್‌ಗಳಿಗೆ ಬಾಡಿಗೆ ಆಧಾರದ ಮೇಲೆ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಎಂದು ವಸತಿ ಖಾತೆ ಸಹ ಹೊಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ರಾಜ್ಯ ವಕ್ಫ್ ಮಂಡಳಿ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಂದರಂತೆ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಅಂಬುಲೆನ್ಸ್ ನೀಡಲಾಗುವುದು. ಪ್ರತಿ ತಾಲೂಕಿಗೆ ಒಂದರಂತೆ ಫ್ರೀಜರ್ ಸಹ ನೀಡಲಾಗುವುದು ಎಂದರು.