ನಾಗಮಂಗಲ:ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ನಡೆದ ಗಲಭೆ ಪೂರ್ವ ಯೋಜಿತ ಕೃತ್ಯ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ, ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.
ನಾಗಮಂಗಲದ ಗಲಭೆ ಪೀ ಡಿತ ಪ್ರದೇಶಗಳಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಮಾತನಾಡಿದರ ಅವರು, ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು.ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ ಎಂದರು.
ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ ಇಟ್ಟುಕೊಂಡು ಗಲಭೆ ಸೃಷ್ಟಿ ಮಾಡಲಾಗಿದೆಯೋ ಗೊತ್ತಿಲ್ಲ ಎಂದು ಕೇಂದ್ರ ಸಚಿವರು ಅನುಮಾನ ವ್ಯಕ್ತಪಡಿಸಿದರು.
ಗಲಭೆಯ ಎಫ್ಐಆರ್ ಪ್ರತಿಯನ್ನು ಹಿಡಿದುಮಾತನಾಡಿದ ಸಚಿವರು ಆರೋಪ ಪಟ್ಟಿ ಸಂಪೂರ್ಣ ಲೋಪದಿಂದ ಕೂಡಿದೆ. ಪೊಲೀಸರ ವರ್ತನೆ ಸಂಶಯಾಸ್ಪದವಾಗಿದೆ ಎಂದು ಹೇಳಿದರು.