ಎಣ್ಣೆ ಪ್ರಿಯರಿಗೆ ಗುಡ್‌ ನ್ಯೂಸ್;‌ ಸ್ವಿಗ್ಗಿಯಲ್ಲಿ ಇನ್ಮುಂದೆ ಆಲ್ಕೋಹಾಲ್ ನಿಮ್ಮ ಮನೆ ಬಾಗಿಲಿಗೆ!

ನವದೆಹಲಿ: ಪರಿಚಯದವರ ಕಣ್ಣುತಪ್ಪಿಸಿ ಬಾರ್‌ಗೆ ಹೋಗುವ ಗೋಜು, ಕೌಂಟರ್‌ನಲ್ಲಿ ಅವಸರದಲ್ಲಿಯೇ ಮದ್ಯವನ್ನು ಹೀರಿ, ಉಪ್ಪಿನಕಾಯಿ ನೆಕ್ಕಿ ಬರುವ ಗಡಿ ಬಿಡಿ ಇರಲ್ಲ, ಆಫೀಸಿನಿಂದ ಮನೆಗೆ ಬರುತ್ತಲೇ ಊಟ ಆರ್ಡರ್‌ ಮಾಡಿದಂತೆ, ಬಿಯರ್‌, ವೈನ್‌ ಸೇರಿ ಯಾವುದೇ…

ನವದೆಹಲಿ: ಪರಿಚಯದವರ ಕಣ್ಣುತಪ್ಪಿಸಿ ಬಾರ್‌ಗೆ ಹೋಗುವ ಗೋಜು, ಕೌಂಟರ್‌ನಲ್ಲಿ ಅವಸರದಲ್ಲಿಯೇ ಮದ್ಯವನ್ನು ಹೀರಿ, ಉಪ್ಪಿನಕಾಯಿ ನೆಕ್ಕಿ ಬರುವ ಗಡಿ ಬಿಡಿ ಇರಲ್ಲ, ಆಫೀಸಿನಿಂದ ಮನೆಗೆ ಬರುತ್ತಲೇ ಊಟ ಆರ್ಡರ್‌ ಮಾಡಿದಂತೆ, ಬಿಯರ್‌, ವೈನ್‌ ಸೇರಿ ಯಾವುದೇ ಮದ್ಯದ ಬಾಟಲಿಗಳನ್ನು ಇನ್ನು ಸ್ವಿಗ್ಗಿ (Swiggy), ಜೊಮ್ಯಾಟೋದಂತಹ ಆನ್‌ಲೈನ್‌ ಕಂಪನಿಗಳ ಮೂಲಕವೇ‌ ಮನೆಯ ಬಾಗಿಲಿಗೆ ತಂದು ಕೊಡುವಂತೆ (Alcohol Home Delivery) ಆರ್ಡರ್‌ ಮಾಡಬಹುದಾಗಿದೆ. ಹೌದು, ಎಣ್ಣೆ ಪ್ರಿಯರು ಓದಿರುವ ಸುದ್ದಿ, ವಾಕ್ಯಗಳು ಸರಿಯಾಗಿಯೇ ಇವೆ. ಶೀಘ್ರದಲ್ಲೇ ಕರ್ನಾಟಕ ಸೇರಿ ದೇಶಾದ್ಯಂತ ಮದ್ಯದ ಹೋಮ್‌ ಡೆಲಿವರಿ (Alcohol Delivery) ಆಗಲಿದೆ.

ಆನ್‌ಲೈನ್‌ ಸರಬರಾಜು ಪ್ಲಾಟ್‌ಫಾರ್ಮ್‌ಗಳಾದ ಸ್ವಿಗ್ಗಿ, ಬಿಗ್‌ಬ್ಯಾಸ್ಕೆಟ್‌, ಜೊಮ್ಯಾಟೋ ಸೇರಿ ಹಲವು ಪ್ಲಾಟ್‌ಫಾರ್ಮ್‌ಗಳ ಮೂಲಕ ಶೀಘ್ರದಲ್ಲೇ ಮನೆಯ ಬಾಗಿಲಿಗೇ ಲಿಕ್ಕರ್‌ ಬಾಟಲಿಗಳನ್ನು ಪೂರೈಸಲಾಗುತ್ತದೆ ಎಂಬುದಾಗಿ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಸದ್ಯ, ನವದೆಹಲಿ, ಕರ್ನಾಟಕ, ಹರಿಯಾಣ, ಪಂಜಾಬ್‌, ತಮಿಳುನಾಡು, ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳು ಹೋಮ್‌ ಡೆಲಿವರಿ ಕುರಿತ ಪೈಲಟ್‌ ಪ್ರಾಜೆಕ್ಟ್‌ಅನ್ನು ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ದೇಶಾದ್ಯಂತ ಹೋಮ್‌ ಡೆಲಿವರಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಆರಂಭಿಕ ಹಂತದಲ್ಲಿ ಮನೆ ಬಾಗಿಲಿಗೆ ಮದ್ಯ ಪೂರೈಸುವ ವ್ಯವಸ್ಥೆ ಜಾರಿಯಾದರೆ, ಹಂತ ಹಂತವಾಗಿ ದೇಶಾದ್ಯಂತ ನಗರ, ಪಟ್ಟಣಗಳಿಗೆ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಬಿಯರ್‌, ವೈನ್‌, ಕಡಿಮೆ ಬೆಲೆಯ ಲಿಕ್ಕರ್‌ಗಳನ್ನು ಮೊದಲಿಗೆ ಪೂರೈಕೆ ಮಾಡಲಾಗುತ್ತದೆ. ಗ್ರಾಹಕರು ಊಟ, ತಿಂಡಿ ಆರ್ಡರ್‌ ಮಾಡಿದಂತೆಯೇ, ಸ್ವಿಗ್ಗಿ, ಜೊಮ್ಯಾಟೋ, ಬಿಗ್‌ಬ್ಯಾಸ್ಕೆಟ್‌ ಅಪ್ಲಿಕೇಷನ್‌ಗಳ ಮೂಲಕ ಮನೆಯ ಬಾಗಿಲಿನವರೆಗೆ ಮದ್ಯವನ್ನು ಪೂರೈಸಲಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಮದ್ಯ ಪ್ರಿಯರು ಆರಾಮವಾಗಿ ಮನೆಯಲ್ಲೇ ಕುಳಿತು ಮದ್ಯ ಸೇವನೆ ಮಾಡಬಹುದಾಗಿದೆ.

Vijayaprabha Mobile App free

“ಭಾರತವು ಆಧುನಿಕತೆಗೆ ತೆರೆದುಕೊಂಡಿದ್ದು, ಮದ್ಯದ ಕುರಿತು ಇದ್ದ ಕಲ್ಪನೆಯೇ ಬದಲಾಗಿಹೋಗಿದೆ. ಮನೆಯಲ್ಲಿ ಟಿ.ವಿ ನೋಡುತ್ತ, ಊಟ ಮಾಡುತ್ತಲೇ ವೈನ್‌ ಹೀರುವ, ಹೆಣ್ಣುಮಕ್ಕಳು ಕೂಡ ಮದ್ಯ ಸೇವನೆ ಮಾಡುವ ಪ್ರಮಾಣ ಜಾಸ್ತಿಯಾಗಿದೆ. ಇನ್ನು, ಮಳೆ, ಚಂಡಮಾರುತ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ಜನ ಮದ್ಯವನ್ನು ಮಳಿಗೆಗಳಿಗೆ ಹೋಗಿ ಖರೀದಿ ಮಾಡಲು ಆಗುವುದಿಲ್ಲ. ಇದಕ್ಕೆ ಆನ್‌ಲೈನ್‌ ಡೆಲಿವರಿಯು ಪ್ರಮುಖ ಉಪಾಯವಾಗಿದೆ” ಎಂದು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲವು ಕಡೆ ಆನ್‌ಲೈನ್‌ ಮೂಲಕ ಮದ್ಯದ ಪೂರೈಕೆ ವ್ಯವಸ್ಥೆ ಜಾರಿಗೆ ಬಂದಿತ್ತಾದರೂ ಅದು ದೇಶಾದ್ಯಂತ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ಸದ್ಯ, ದೇಶದಲ್ಲಿ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾತ್ರ ಮದ್ಯವನ್ನು ಆನ್‌ಲೈನ್‌ ಮೂಲಕ ಹೋಮ್‌ ಡೆಲಿವರಿ ಮಾಡಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.