ತಿರುವನಂತಪುರಂ : ಕೇವಲ ಐದು ನಿಮಿಷ ಲಿಫ್ಟ್‌ನಲ್ಲಿ ಇದ್ದರೆ ಉಸಿರು ಕಟ್ಟಿದಂತೆ ಆಗುತ್ತೆ. ಆದರೆ ಇಲ್ಲೊಬ್ಬ ವ್ಯಕ್ತಿ ಎರಡು ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡು ನರಕಯಾತನೆ ಅನುಭವಿಸಿಬಿಟ್ಟಿದ್ದಾನೆ. ಈ ಘಟನೆ ತಿರುವನಂತಪುರಂದಲ್ಲಿ ನಡೆದಿದೆ.
ತಿರುವನಂತಪುರಂ ಮೆಡಿಕಲ್ ಕಾಲೇಜಿನ ಒಪಿ ಬ್ಲಾಕ್‌ಗೆ ಪತ್ನಿಯೊಂದಿಗೆ ಉಳ್ಳೂರು ನಿವಾಸಿ ರವೀಂದ್ರನ್ ನಾಯರ್ (59) ಎಂಬುವವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಕೆಲಸಕ್ಕೆಂದು ಬಂದ ಪತ್ನಿಯನ್ನು ಬಿಟ್ಟು ಕೆಳಗಡೆ ಹೋಗಬೇಕೆಂದು ಪತಿ ಮೊದಲ ಮಹಡಿಗೆ ಹೋಗಲು ಲಿಫ್ಟ್‌ಗೆ ಹತ್ತಿದ್ದಾರೆ. ಆದರೆ ಲಿಫ್ಟ್ ಏಕಾಏಕಿ ಕೆಳಗೆ ಇಳಿದು ಬಿಟ್ಟಿದೆ. ಆದರೆ ಲಿಫ್ಟ್ನ ಬಾಗಿಲು ಓಪನ್ ಆಗಲಿಲ್ಲವಂತೆ. ಆಗ ಗಾಬರಿಕೊಂಡ ರವೀಂದ್ರನ್ ನಾಯರ್ ಸಹಾಯಕ್ಕಾಗಿ ಕೂಗಿದ್ದಾರಂತೆ. ಬಳಿಕ ಲಿಫ್ಟ್ನ ಎಚ್ಚರಿಕೆಯನ್ನು ಬಟನ್ ಒತ್ತಿದರು ಯಾರು ಪ್ರತಿಕ್ರಿಯೆ ನೀಡಲಿಲ್ಲವಂತೆ. ಆದರೆ ಅವರ ಫೋನ್ ಸಹ ಸ್ವಿಚ್ ಆಫ್ ಆಗಿತ್ತಂತೆ. ಹೀಗೆ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಅವರು ಏನೂ ತೋಚದೆ ಸುಮ್ಮನಾಗಿಬಿಟ್ಟಿದ್ದಾರೆ. ಹೀಗೆ ಲಿಫ್ಟ್ ಎರಡು ದಿನಗಳ ಕಾಲ ಲಿಫ್ಟ್ನಲ್ಲೇ ಸಿಕ್ಕಿಹಾಕಿಕೊಂಡಿದ್ದರಂತೆ.
ಮುಂಜಾನೆ ಹೋದ ತಂದೆ ಎರಡು ದಿನವಾದರೂ ಮನೆಗೆ ಬಂದಿಲ್ಲ ಅಂತ ನಾಯರ್ ಕುಟುಂಬಸ್ಥರು ವೈದ್ಯಕೀಯ ಕಾಲೇಜು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ನಾಯರ್ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ನಾಯರ್ ಅವರ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ. ಬಳಿಕ ಸೋಮವಾರ ಬೆಳಗ್ಗೆ ಲಿಫ್ಟ್ ನಿರ್ವಾಹಕರು ನಿತ್ಯದ ಕೆಲಸಕ್ಕಾಗಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಕುರಿತು ತನಿಖೆ ನಡೆಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ. ಈ ಸಂಬಂಧ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಇದೆ.