ವಿಜಯಪ್ರಭ.ಕಾಂ ವಿಶೇಷ, ಹರಪನಹಳ್ಳಿ: ಸಮಾಜಮುಖಿ, ಬಹುಮುಖಿ, ಸಜ್ಜನ ಮತ್ತು ಪ್ರತಿಭಾವಂತ ರಾಜಕಾರಣಿ ಎಂದು ಹೆಸರು ಪಡೆದಿದ್ದ ದಿವಂಗತ ಎಂ.ಪಿ.ಪ್ರಕಾಶ್ ಅವರು ಹಡಗಲಿ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿದ್ದರೂ ಹರಪನಹಳ್ಳಿ ಜನರಿಗೆ ಅವರು ಈಗಲೂ ಮಾಸದ ನಾಯಕ.
ಹಾಗೆ ನೋಡಿದರೆ ಎಂ.ಪಿ.ಪ್ರಕಾಶ್ ಅವರಿಗೆ ಹರಪನಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ಜಯಭೇರಿ ದಕ್ಕಿರಲಿಲ್ಲ. ರಾಜಕೀಯ ಸನ್ನಿವೇಶಗಳ ಕಾರಣಕ್ಕೆ ಹಿರಿಯ ರಾಜಕಾರಣಿ ಏಳು ಬೀಳುಗಳನ್ನು ಕಂಡಿದ್ದರು. ಜನತಾ ದಳದಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತು 2008ರಲ್ಲಿ ಕಾಂಗ್ರೆಸ್ ಸೇರಿದ್ದ ಅವರು ಸೋಲುಕಂಡಿದ್ದರು. ಆದರೆ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಕಾರಣಕ್ಕೆ ಕ್ಷೇತ್ರದ ಜನರ ಮನಸ್ಸಿನಲ್ಲಿ ವಿಶೇಷ ಪ್ರೀತಿ ಗಳಿಸಿದ್ದರು.
ಅವರ ಕಾಲವಾದ ನಂತರ ಅನುಕಂಪದ ಅಲೆಯಲ್ಲಿ ವಿಧಾನಸಭೆಗೆ ಆಯ್ಕೆಯಾದ ಅವರ ಪುತ್ರ ಕೂಡ ಮುಂದೆ ತಾಲೂಕಿನ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಗ್ಯ ಸಮಸ್ಯೆ ಕಾರಣಕ್ಕೆ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಒಂದು ವೇಳೆ ಸ್ಥಳೀಯ ನಾಯಕರು ಸಂಘಟಿತ ಹೋರಾಟ ಮಾಡಿದ್ದರೆ ರವೀಂದ್ರ ಜಯ ಗಳಿಸುತ್ತಿದ್ದರು ಎಂಬ ಮಾತು ಈಗಲೂ ಕೇಳಿಬರುತ್ತಿವೆ.
ರಾಜಕೀಯ ಅಸ್ತಿತ್ವಕ್ಕೆ ಸಹೋದರಿಯರ ಓಡಾಟ:
ಜನರಲ್ಲಿ ಅಪಾರ ಪ್ರೀತಿ ಗಳಿಸಿದ್ದ ಎಂ.ಪಿ.ರವೀಂದ್ರ ಅವರ ಅಕಾಲಿಕ ಮರಣ ಅವರ ಅಭಿಮಾನಿಗಳನ್ನು ಈಗಾಲೂ ಕಾಡುತ್ತಿದೆ. ತಂದೆಯಂತೆ ಸಜ್ಜನರಾಗಿದ್ದ ಎಂ.ಪಿ.ರವೀಂದ್ರ ಕಾಂಗ್ರೆಸ್ ಗೆ ಅನಿವಾರ್ಯವಾಗಿದ್ದರು. ಹಿಂದಿನ ಬಾರಿ ನನಗೆ ಟಿಕೆಟ್ ಬೇಡವೆಂದರೂ ಪಕ್ಷ ಅವರಿಗೆ ಮಣೆ ಹಾಕಿತ್ತು. ಒಂದು ವೇಳೆ ಅವರಿಗೆ ಆರೋಗ್ಯ ಕೈಕೊಡದೇ ಇದ್ದರೆ ತಂದೆಯಂತೆ ದೊಡ್ಡ ನಾಯಕರಾಗಿ ಬೆಳೆಯುತ್ತಿದ್ದರು ಎನ್ನುತ್ತಾರೆ ಅವರ ಅಭಿಮಾನಿಗಳು.
ಎಂ.ಪಿ.ರವೀಂದ್ರ ನಂತರ ತೆರವಾದ ಸ್ಥಾನಕ್ಕೆ ಅವರ ಸಹೋದರಿಯರ ಪೈಪೋಟಿ ಹೆಚ್ಚಿದೆ. ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿರುವ ಎಂ.ಪಿ.ಲತಾ ಹಾಗೂ ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷೆ ಎಂ.ಪಿ.ವೀಣಾ ತಂದೆ, ಸಹೋದರನಂತೆ ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.
ಕೋವಿಡ್, ಪ್ರವಾಹ ಸಂದರ್ಭದಲ್ಲಿ ಎಂ.ಪಿ.ಲತಾ ಜನರ ನಡುವೆ ನಿಂತು ಕೆಲಸ ಮಾಡುತ್ತಿದ್ದಾರೆ. ಈರುಳ್ಳಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಿಸಲು ಎಂ.ಪಿ.ವೀಣಾ ಈಚೆಗೆ ಪ್ರತಿಭಟನೆ ನಡೆಸಿದ್ದು, ಕ್ಷೇತ್ರದ ಜನರ ಮನಸಿನಲ್ಲಿ ಬೇರೂರಲು ಪ್ರಯತ್ನ ನಡೆಸುತ್ತಿದ್ದಾರೆ.
ಪ್ರಬಲ ಕೈ ನಾಯಕರಿಲ್ಲದ ಕ್ಷೇತ್ರಕ್ಕೆ ಪಿ.ಟಿ.ಮರಮೇಶ್ವರ್ ನಾಯಕ್ ಮತ್ತೆ ಎಂಟ್ರಿ!
ಸದ್ಯ ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರಬಲ ಕೈ ನಾಯಕರಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಎಂ.ಪಿ.ಪ್ರಕಾಶ್ ಪುತ್ರಿಯರು ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದ್ದು, ಶಾಸಕ ಪಿ.ಟಿ.ಪರಮೇಶ್ವರ್ ನಾಯಕ್ ಮತ್ತೆ ತವರು ಕ್ಷೇತ್ರಕ್ಕೆ ಎಂಟ್ರಿ ಕೊಡುವ ಲಕ್ಷಣ ದಟ್ಟವಾಗಿ ಕಾಣುತ್ತಿವೆ. ಸತತ ಎರಡು ಬಾರಿ ಕ್ಷೇತ್ರದ ಶಾಸಕರಾಗಿದ್ದ ಪಿ.ಟಿ.ಪರಮೇಶ್ವರ್ ನಾಯಕ್ ಕಳೆದ ಬಾರಿ ಹೂವಿನ ಹಡಗಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಹರಪನಹಳ್ಳಿ ಕ್ಷೇತ್ರದಲ್ಲಿ ಹೆಚ್ಚು ಪ್ರಾಬಲ್ಯ ಇರುವ ಪಿ.ಟಿ.ಪರಮೇಶ್ವರ್ ನಾಯಕ್ ಮತ್ತೆ ತವರು ಕ್ಷೇತ್ರಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶನಿವಾರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಪಿ.ಟಿ.ಪರಮೇಶ್ವರ್ ನಾಯ್ಕ, ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕಾಂಗ್ರೆಸಿಗರೇ ಕಾರಣ. ಮುಂದಿನ ಬಾರಿ ಯಾರಿಗೇ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸುವೆ ಎಂದಿದ್ದಾರೆ. ಕೈ ನ ಸ್ಥಳೀಯ ನಾಯಕತ್ವಕ್ಕೆ ಈಗಾಲೇ ಪ್ರಯತ್ನ ಆರಂಭವಾಗಿದ್ದು, ಸದ್ಯ ತ್ರಿಕೋನ ಸ್ಪರ್ಧೆಯ ರೂಪ ಪಡೆದಿದೆ. ಮುಂದೆ ಯಾರು ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
(ಸ್ಥಳೀಯ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗೆ ವಿಜಯಪ್ರಭ.ಕಾಂ ಗೆ ಲಾಗಿನ್ ಆಗಿ)