ಅಟಲ್ ಪಿಂಚಣಿ ಯೋಜನೆಗೆ (ಎಪಿವೈ) ಸೇರ್ಪಡೆಯಾಗುವವರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚಾಗುತ್ತಿದ್ದು, ನೀವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಈ ಯೋಜನೆ ಲಾಭ ಪಡೆಯಬಹುದು.
ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಠೇವಣಿ ಮಾಡುವ ಮೂಲಕ ವೃದ್ಧಾಪ್ಯದಲ್ಲಿ ₹1000 ರಿಂದ ₹5000 ವರೆಗೆ ಮಾಸಿಕ ಪಿಂಚಣಿ ಲಾಭವನ್ನು ಪಡೆಯಬಹುದು. ಅಂದರೆ ವರ್ಷಕ್ಕೆ ₹60,000 ವರೆಗೆ ಪಿಂಚಣಿ ಪಡೆಯಬಹುದಾಗಿದೆ. ಈ ಹಣಕಾಸಿನ ವರ್ಷದಲ್ಲಿ 99 ಲಕ್ಷಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು ತೆರೆಯಲಾಗಿದೆ.
ತಿಂಗಳಿಗೆ ₹ 210 ಪಾವತಿ, ₹ 5000 ಪಿಂಚಣಿ:
ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯಬೇಕು ಅಂದರೆ ಅದಕ್ಕೆ ಈಗಲೇ ಪ್ಲಾನ್ ಮಾಡಿ. ಸರ್ಕಾರ ಅಟಲ್ ಪಿಂಚಣಿ ಯೋಜನೆ ರೂಪಿಸಿದ್ದು, ಇದರಲ್ಲಿ 18 ರಿಂದ 40 ವರ್ಷದೊಳಗಿನ ವ್ಯಕ್ತಿಗಳು ಹೂಡಿಕೆ ಮಾಡಬಹುದು.
ಪ್ರತಿ ತಿಂಗಳು ₹ 42 ರಿಂದ ₹ 210 ಪಾವತಿಸಿದರೆ, 60 ವರ್ಷದ ಬಳಿಕ ನಿಮಗೆ ₹ 1000- ₹ 5000 ಪಿಂಚಣಿ ಸಿಗಲಿದ್ದು, ನಿಮ್ಮ ಹೂಡಿಕೆಯ ಮೊತ್ತದ ಮೇಲೆ ಪಿಂಚಣಿ ಮೊತ್ತ ನಿರ್ಧಾರವಾಗುತ್ತದೆ. ಈ ಯೋಜನೆ ಮೂಲಕ ಸ್ವಾವಲಂಭಿ ಬದುಕು ಸಾಗಿಸುವ ಕನಸು ನನಸಾಗಲಿದೆ.