ರಾಜ್ಯದಲ್ಲಿ ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್ಗಳಲ್ಲಿ ಆಟೊರಿಕ್ಷಾ ಸೇವೆಗಳು ಇಂದಿನಿಂದ ಸ್ಥಗಿತವಾಗಲಿದ್ದು, ಈ ಕುರಿತು ಸಾರಿಗೆ ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ಮಾಹಿತಿ ನೀಡಿದ್ದಾರೆ.
ಹೌದು, ಮಂಗಳವಾರ ಬೆಂಗಳೂರಿನ ಶಾಂತಿ ನಗರದ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಟಿಹೆಚ್ಎಂ ಕುಮಾರ್ ಅವರು, ಇಂದಿನಿಂದ (ಬುಧವಾರ) ರಾಜ್ಯದಲ್ಲಿ ಓಲಾ, ಉಬರ್ ಮತ್ತು ರಾಪಿಡೊ ಆಟೋ ಸೇವೆಗಳು ಸ್ಥಗಿತಗೊಳ್ಳಲಿವೆ. ನಿಯಮದ ಪ್ರಕಾರ, ಅವರಿಗೆ ಆಟೋ ಸೇವೆ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಆಪ್ ನಿಂದ ಆಟೋ ಸೇವೆಯನ್ನು ತೆಗೆದು ಹಾಕುವಂತೆ ಅವರಿಗೆ ಸೂಚಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಪರವಾನಗಿ ಪಡೆದ ಬಳಿಕವಷ್ಟೇ ಆಟೋಗಳನ್ನು ಚಲಾಯಿಸಬಹುದಾಗಿದ್ದು, ಸಾರಿಗೆ ಇಲಾಖೆ ನಿಗದಿಪಡಿಸಿದ ದರದಲ್ಲೇ ಆಟೊ ಓಡಿಸಬೇಕು. ನಿಯಮ ಉಲ್ಲಂಘಿಸಿ ಆಟೊ ಓಡಿಸಿದರೆ ಓಲಾ, ಊಬರ್ ಸಂಸ್ಥೆಗೆ 5 ಸಾವಿರ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತರು ಟಿಹೆಚ್ಎಂ ಕುಮಾರ್ ಮಾಹಿತಿ ನೀಡಿದ್ದಾರೆ.