ದಾವಣಗೆರೆ ಸೆ.03: ದಾವಣಗೆರೆ ಗ್ರಾಮಾಂತರ ಪ್ರದೇಶದ ಎಲೆಬೇತೂರು ಗ್ರಾಮದ ಹತ್ತಿರ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಪತ್ತೆ ಮಾಡಿ, ಜಪ್ತಿ ಮಾಡಿಕೊಳ್ಳಲಾದ ಧಾನ್ಯವನ್ನು ಸೆ.12 ರಂದು ದಾವಣಗೆರೆಯ ಟಿ.ಎ.ಪಿ.ಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎಪಿಎಂಸಿ ಯಾರ್ಡ್, ಡಿ ಬ್ಲಾಕ್, ಎ.ಆರ್.ಸಿ ಗೋದಾಮು, ಎ.ಪಿ.ಎಂ.ಸಿ ಕಚೇರಿ ಹಿಂಭಾಗ ದಾವಣಗೆರೆ ಇಲ್ಲಿ ಬಹಿರಂಗ ಹರಾಜು ಮಾಡಲಾಗುವುದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ಎಲೆಬೇತೂರು ಗ್ರಾಮದ ಅನೌಪಚಾರಿಕ ಪಡಿತರ ಪ್ರದೇಶದ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 5.85 ಕ್ವಿಂಟಲ್ ಅಕ್ಕಿಯನ್ನು ಕಳೆದ ಜುಲೈ 09 ರಂದು, ಆಹಾರ ನಿರೀಕ್ಷಕರು ಭಾಗ-1 ಮತ್ತು ಪೊಲೀಸ್ ಉಪನಿರೀಕ್ಷಕರು ಪತ್ತೆ ಮಾಡಿ ಜಪ್ತಿ ಮಾಡಿಕೊಂಡಿದ್ದರು.
ಜಪ್ತಿ ಮಾಡಿಕೊಳ್ಳಲಾಗಿರುವ ಅಕ್ಕಿ ಮತ್ತು ರಾಗಿಯನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ, ಸೆ.12 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ಗಂಟೆಯವರೆಗೆ ಆಯಾ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಸಮಯದಲ್ಲಿ ಟಿ.ಎ.ಪಿ.ಸಿ.ಎಂ.ಎಸ್(ಲಿ) ಗ್ರಾಮಾಂತರ ಸಗಟು ಮಳಿಗೆ, ಎಪಿಎಂಸಿ ಯಾರ್ಡ್, ಡಿ ಬ್ಲಾಕ್, ಎ.ಆರ್.ಸಿ ಗೋದಾಮು, ಎ.ಪಿ.ಎಂ.ಸಿ ಕಚೇರಿ ಹಿಂಭಾಗ ದಾವಣಗೆರೆ ಇಲ್ಲಿ ಸಹಾಯಕ ನಿರ್ದೇಶಕರ ಸಮಕ್ಷಮದಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಎಪಿಎಂಸಿ ಟ್ರೇಡ್ ಲೈಸೆನ್ಸ್ನೊಂದಿಗೆ ಹಾಜರಾಗಬೇಕು. ಬಿಡ್ಡುದಾರರು ಹರಾಜು ದಿನ ಒಂದು ಗಂಟೆ ಮುಂಚೆ ಬಂದು ಶೇ 10 ರಷ್ಟು ಮೊಬಲಗನ್ನು ಮುಂಗಡ ಠೇವಣಿಯಾಗಿ ಇಡಬೇಕಾಗಿದ್ದು, ತಪ್ಪಿದಲ್ಲಿ ಅಂತಹವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಯನ್ನು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು ಎಂದು ತಹಶೀಲ್ದಾರ್ ಬಸನಗೌಡ ಕೋಟೂರ ಪ್ರಕಟಣೆ ತಿಳಿಸಿದ್ದಾರೆ.