ದಾವಣಗೆರೆ ಆ.19 :ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆಯಡಿ ಆರ್ಥಿಕ ಚಟುವಟಿಕೆ ಅನುಸಾರ ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಮತ್ತು ಸಹಾಯಧನ ಯೋಜನೆ ಸೌಲಭ್ಯ ಒದಗಿಸಲಾಗುವುದು.
ಅರ್ಜಿದಾರರು 18 ರಿಂದ 25 ವರ್ಷದ ಒಳಗಿನವರಾಗಿರಬೇಕು. ವಾರ್ಷಿಕ ವರಮಾನ ರೂ.8,00,000/-ಗಳ ಮಿತಿಯೊಳಗಿರಬೇಕು. ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ಘಟಕ ವೆಚ್ಚ ರೂ.50,000 ವರೆಗೆ ಶೇ.20 ರಷ್ಟು ಸಹಾಯಧನ (ಗರಿಷ್ಠ ರೂ.10,000) ಶೇ.80 ರಷ್ಟು ಸಾಲವನ್ನು ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ ರೂ.50,000 ಗಳಿಂದ ಗರಿಷ್ಠ ರೂ.1,00,000 ದವರೆಗೆ ಶೇ.20 ರಷ್ಟು(ಗರಿಷ್ಠ 20,000) ಉಳಿಕೆ ಮೊತ್ತ ರೂ.80,000 ಗಳ ಸಾಲವನ್ನು ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ ರೂ.1,00,000 ದಿಂದ ಗರಿಷ್ಠ 2,00,000 ವರೆಗೆ ಶೇ.15 ರಷ್ಟು ರೂ.(ಗರಿಷ್ಠ 30,000) ಶೇ.85 ರಷ್ಟು ಸಾಲವನ್ನು ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಒದಗಿಸಲಾಗುವುದು.
ಈ ಯೋಜನೆಗೆ ಆನ್‍ಲೈನ್ ಮೂಲಕ “ಸುವಿಧಾ” https://suvidha.karnataka.gov.in) ಪೋರ್ಟಲ್‍ನಲ್ಲಿ ಅರ್ಜಿಗಳನ್ನು ಸಲ್ಲಿಸುವುದು. ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಮರಾಠ ಸಮುದಾಯದ ಯುವಜನತೆಯನ್ನು ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗ ಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ IT IS, GTTC, KGTTI ಇತ್ಯಾದಿಗಳಲ್ಲಿ ಅಲ್ಫಾವದಿ ಕೋರ್ಸುಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ತಂತ್ರಾಂಶ https://www.kaushalkar.com ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಸೆಪ್ಟಂಬರ್ 05 ರೊಳಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ), ಕುರುಬರ ಹಾಸ್ಟೇಲ್ ಕಟ್ಟಡ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ ಕಛೇರಿಯನ್ನು ಅಥವಾ ದೂರವಾಣಿ ಸಂಖ್ಯೆ: 08192 230934 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.