ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯ ಭದ್ರಾ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 12 ಗಂಟೆಗೆ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರು ಹರಿಸಲಾಗಿದೆ. 186 ಅಡಿ ಪೂರ್ಣಮಟ್ಟದ ಭದ್ರಾ ಡ್ಯಾಮ್ ನಲ್ಲಿ ಈಗ ನೀರಿನ ಮಟ್ಟ 183.50 ಅಡಿಗೆ ತಲುಪಿದೆ. ಇನ್ನು, ಭದ್ರಾ ಜಲಾಶಯ ಒಳ ಹರಿವು 43 ಸಾವಿರ ಕ್ಯೂಸೆಕ್ ಇರುವುದರಿಂದ ಭರ್ತಿಗೆ ಇನ್ನೂ ಎರಡೂವರೆ ಅಡಿ ಬಾಕಿ ಇರುವಂತೆ ಗೇಟ್ ಗಳನ್ನು ತರೆದು ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಅವಧಿಗೆ ಮುನ್ನವೇ ಭದ್ರಾ ಡ್ಯಾಂ ಭರ್ತಿ:
ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳ ಜೀವನಾಡಿ ಆಗಿರುವ ಭದ್ರಾ ಡ್ಯಾಂ ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜುಲೈ 15ರೊಳಗೆ ಭರ್ತಿ ಆಗಿರುವುದು ಭದ್ರ ನಾಲೆಯ ಅಕ್ಕಪಕ್ಕದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ವಿಶ್ವಪ್ರಸಿದ್ಧ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆ:
ಇನ್ನು, ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ವಿಶ್ವಪ್ರಸಿದ್ಧ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗಿದ್ದು, ತುಂಗಭದ್ರಾ ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್ ಗಳ ಪೈಕಿ 31 ಗೇಟ್ ಗಳಿಂದ ನದಿಗೆ 1,15,344 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಇನ್ನು, ತುಂಗಭದ್ರಾ ಜಲಾಶಯದ ಒಳಹರಿವು1,04,494 ಕ್ಯುಸೆಕ್ ಇದ್ದು, 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯದಲ್ಲಿ 99.898 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ಒಂದೂವರೆ ಲಕ್ಷ ಕ್ಯುಸೆಕ್ ನೀರು ಯಾವುದೇ ಕ್ಷಣದಲ್ಲೂ ನದಿಗೆ ಹರಿಸಲಾಗುವುದು ಎಂದು ಜಲಾಶಯ ಆಡಳಿತ ಮಂಡಳಿ ಹೇಳಿದ್ದು, ಜನ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದೆ.
122 ಅಡಿಗೆ ತಲುಪಿದ ಕೆಆರ್ಎಸ್ ಜಲಾಶಯ
ಕೆಆರ್ಎಸ್ ಜಲಾಶಯ ಗರಿಷ್ಠ ಮಟ್ಟದತ್ತ ತಲುಪುತ್ತಿದ್ದು ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶನಿವಾರ ಮಧ್ಯಾಹ್ನ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 35 ಸಾವಿರ ಕ್ಯುಸೆಕ್ ದಾಟಿದೆ.
ಶನಿವಾರ ಮಧ್ಯಾಹ್ನ ಜಲಾಶಯದ ನೀರಿನ ಮಟ್ಟ122 ಅಡಿಗೆ ತಲುಪಿದ್ದು, ಭರ್ತಿಗೆ 2.80 ಅಡಿ ಬಾಕಿ ಉಳಿದಿದ್ದು, ಜೊತೆಗೆ ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ನೀರು ಬಿಡುಗಡೆ ಮಾಡಲಾಗಿದೆ.