ದಾವಣಗೆರೆ: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್‌ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಯಿದ್ದು, ಅವರ ಮಗನ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯ(Enforcement Directorate,ED) ಭೀತಿ ಎದುರಾಗಿದೆ.
ಹೌದು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರನ ಮನೆ ಕಚೇರಿ ಬೆಂಗಳೂರು, ದಾವಣಗೆರೆ, ಹಾವೇರಿಗಳಲ್ಲಿ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 8 ಕೋಟಿಗೂ ಹೆಚ್ಚು ಹಣ, ಚಿನ್ನ, ಆಸ್ತಿಪತ್ರಗಳು ಪತ್ತೆಯಾಗಿವೆ. ಸದ್ಯ ಈ ಪ್ರಕರಣವನ್ನು ಶಾಸಕನ ಪುತ್ರ ಪ್ರಶಾಂತ್‌ಗೆ ಇಡಿ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಜ್ಞಾತ ಸ್ಥಳದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಭೀತಿ
ಇನ್ನು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಬೆನ್ನಲ್ಲೆ ಶಾಸಕ ವಿರೂಪಾಕ್ಷಪ್ಪ ಕೆಎಸ್ಡಿಎಲ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ನಡುವೆ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಾಥಮಿಕ ವರದಿಯಲ್ಲಿ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರೇ ಮೊದಲನೇ ಆರೋಪಿಯಾಗಿದ್ದು, ಇನ್ನು ಎರಡನೇ ಆರೋಪಿಯಾಗಿ ಅವರ ಪುತ್ರ ಹಾಗೂ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕ ಪ್ರಶಾಂತ್ ಹೆಸರು ಉಲ್ಲೇಖವಾಗಿದೆ.
ಈ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್‌ಗೆ ಈಗಾಗಲೇ 14 ದಿನ ನ್ಯಾಯಾಂಗ ಬಂಧನವಾಗಿದ್ದು, ಪ್ರಶಾಂತ್ ಸೇರಿದಂತೆ ಐವರರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಲೋಕಾಯುಕ್ತ ಕೋರ್ಟ್ ಆದೇಶ ಹೊರಡಿಸಿದ್ದು, ಈ ನಡುವೆ ಲೋಕಾಯುಕ್ತ ಪೊಲೀಸರು ಶಾಸಕ ಮಾಡಳ್ ವಿರೂಪಾಕ್ಷಪ್ಪ ಅವರನ್ನು ಕೂಡ ಬಂಧಿಸಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.