ಮಂಡ್ಯ: ರೈತರ ಜಮೀನು, ಹಿಂದೂ ದೇಗುಲ ಮಾತ್ರವೇ ಅಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ ಎಂದು ಆರ್‌ಟಿಸಿಗಳಲ್ಲಿ ಬದಲಾಗಿರುವುದು ಕಂಡುಬಂದಿದೆ. ಇದನ್ನು ನೋಡಿದಾಗ ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಆಗಿಂದಾಗ್ಗೆ ವಕ್ಫ್ ಆಸ್ತಿಯನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿರಬಹುದೆಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ.
ಶ್ರೀರಂಗಪಟ್ಟಣ ತಾಲೂಕು ಚಂದಗಾಲು ಗ್ರಾಮದ ಸರ್ವೇ ನಂ.೨೧೫ರಲ್ಲಿರುವ ೩೦ ಗುಂಟೆ ಜಾಗವನ್ನು ವಕ್ಫ್ ಆಸ್ತಿ ಎಂದು ಬದಲಾವಣೆ ಮಾಡಲಾಗಿದೆ. ಮದ್ದೂರು ತಾಲೂಕಿನ ೪೩೮/೨ರಲ್ಲಿರುವ ೧.೩೭ ಎಕರೆ ಜಮೀನು ಸರ್ಕಾರಿ ಸ್ಮಶಾನ ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ನಮೂದಿಸಿರುವುದು ಕಂಡುಬಂದಿದೆ.
ಬೂದನೂರು ಗ್ರಾಮದ ಸರ್ವೇ ನಂ.೩೧೩ರಲ್ಲಿ ೧.೧೩ ಎಕರೆ ಸರ್ಕಾರಿ ಕಟ್ಟೆ ಜಾಗವನ್ನು ೨೦೧೭ರಲ್ಲಿ ವಕ್ಫ್ ಆಸ್ತಿ ಎಂದು ತಿದ್ದುಪಡಿ ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕಾಲಾಂತರದಲ್ಲಿ ಹಿಂದೂಗಳ ರುದ್ರಭೂಮಿ, ದೇವಸ್ಥಾನ, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ರೈತರ ಜಮೀನುಗಳು ವಕ್ಫ್ ಆಸ್ತಿ ಎಂದು ಬದಲಾಗಿರಬಹುದೆಂದು ಶಂಕಿಸಲಾಗಿದೆ.
ಈ ಸರ್ವೇ ನಂಬರ್‌ಗಳ ಮೂಲ ದಾಖಲೆಗಳಲ್ಲಿ ಏನಿತ್ತು, ನಂತರದಲ್ಲಿ ಬದಲಾದ ಆದೇಶದಲ್ಲೇನಿದೆ ಎಂಬುದನ್ನೆಲ್ಲಾ ಸಮಗ್ರವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿ ಸಮಗ್ರ ತನಿಖೆಗೊಳಪಡಿಸಿದಾಗಲೇ ವಕ್ಫ್‌ನ ನಿಜ ಬಣ್ಣ ಬಯಲಾಗಲಿದೆ ಎಂದು ಸಾರ್ವಜನಿಕರನೇಕರು ಒತ್ತಾಯಿಸಿದ್ದಾರೆ.