ಬೆಂಗಳೂರು: ಸಂವಿಧಾನ ತಿದ್ದುಪಡಿ ಬಗ್ಗೆ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿಯ ಬಗ್ಗೆ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸಾಬೀತಾದರೆ, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇದು ಸಾಬೀತಾಗದಿದ್ದರೆ, ನನ್ನ ಮೇಲೆ ಆರೋಪ ಮಾಡುವ ಬಿಜೆಪಿ ನಾಯಕರು ರಾಜಕೀಯದಿಂದ ನಿವೃತ್ತರಾಗುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡಲು ನಾನು ಹೆದರುವುದಿಲ್ಲ. ನಾನು ನೀಡಿದ ಸಂದರ್ಶನದಲ್ಲಿ ಸತ್ಯವನ್ನು ಹೇಳಿದ್ದೇನೆ ಮತ್ತು ನನ್ನ ರಾಜಕೀಯ ನಿಲುವನ್ನು ವ್ಯಕ್ತಪಡಿಸಿದ್ದೇನೆ. ನಾನು ಈ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ಸದಸ್ಯ.ನಾಗಿದ್ದು, ಸಂವಿಧಾನವನ್ನು ಬದಲಾಯಿಸುವ ಕನಸು ಕಾಣುವುದು ನಮ್ಮ ಹಕ್ಕು ಅಲ್ಲ. ಆದರೆ, ಬಿಜೆಪಿ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂತಹ ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನಾನು ನನ್ನ ರಾಜಕೀಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಬಿಜೆಪಿ ಸಹಿಸುವುದಿಲ್ಲ. ನಾವು ಸಂವಿಧಾನವನ್ನು ಜಾರಿಗೆ ತಂದವರಾಗಿರುವುದರಿಂದ, ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾಂಗ್ರೆಸ್ ಪಕ್ಷ ಮತ್ತು ನಾನು ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇವೆ ಎಂದರು.