ಶಿರಸಿ: ಕರ್ನಾಟಕದಲ್ಲಿ ಬಿಜೆಪಿ ಪಕ್ಷವಾಗಿ ಉಳಿಯದೇ ಪಂಗಡಗಳೇ ಪಕ್ಷವಾಗಿದೆ ಎಂದು ಬಿಜೆಪಿ ನಾಯಕರ ಬಗ್ಗೆಯೇ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕೌಂಟರ್ ಕೊಟ್ಟಿದ್ದಾರೆ.
ಶಿರಸಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕೇವಲ ಒಂದು ಕಡೆ ಅಂತಲ್ಲ, ಮಾಧ್ಯಮಕ್ಕೆ ಕಾಣುತ್ತಿರುವುದು ಒಂದು ಪಂಗಡ ಮಾತ್ರ. ನಾನು ಹಾಗೂ ಎಸ್.ಟಿ.ಸೋಮಶೇಖರ್ ಸ್ವಲ್ಪ ಮಾತಿನಿಂದ ಬದಿಗೆ ಹೋದಾಗ ನಮ್ಮ ಪಂಗಡ ಅಂದ್ರು. ಇನ್ನೂ ಕಾದು ನೋಡಿ, ಮತ್ತೊಂದು ಪಂಗಡ ನಿರ್ಮಾಣವಾಗುತ್ತೆ, ಬಿಜೆಪಿ ಒಡೆದು ಹೋಗುತ್ತಿರುವುದು ಮಾಧ್ಯಮಕ್ಕೆ ಗೊತ್ತಾಗುತ್ತಿದೆಯಲ್ಲವೇ?. ಕರ್ನಾಟಕ ಬಿಜೆಪಿಯಲ್ಲಿ ನಾಯಕರೇ ಇಲ್ಲ, ಕೊರತೆ ಎಲ್ಲಿಂದ ಬಂತು? ನೋ ಲೀಡರ್ ಎಂದಿದ್ದಾರೆ.
ನಾನು ಒಂದು ವರ್ಷದಿಂದ ಪಕ್ಷದ ಬೆಳವಣಿಗೆಯಿಂದ ದೂರವಿದ್ದೇನೆ. ಪಕ್ಷದಲ್ಲಿ ನಡೆಯುವ ಆಕ್ರಮಣಕಾರಿ ಸಂದೇಶಗಳು ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ ಹಲವರು ಮಾತನಾಡುತ್ತಾರೆ, ವಿಚಾರಗಳನ್ನು ಹೇಳ್ತಾರೆ ಎಂದರು. ಇನ್ನು ಯತ್ನಾಳ್, ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಅವರೆಲ್ಲಾ ನನ್ನ ಸ್ನೇಹಿತರು. ಆದರೆ, ಈ ಬೆಳವಣಿಗೆಗೆ ಅಂತಿಮವಿಲ್ಲ, ಬೆಳವಣಿಗೆ ಅಂತಿಮ ಘಟ್ಟಕ್ಕೆ ತಲುಪಿದೆ, ಇನ್ನೂ ಮತ್ತೆ ಜೋರಾಗಲಿದೆ ಎಂದಿದ್ದಾರೆ.
ಇನ್ನು ಯಾವುದೇ ರಾಜಕೀಯ ಪಕ್ಷದಲ್ಲಿ ಅಶಿಸ್ತನ್ನು ಬಹಳ ದಿನ ನುಂಗಿಕೊಂಡು ಹೋದ್ರೆ. ಬಹಳ ಅಶಿಸ್ತು ಹೊಟ್ಟೆಯಲ್ಲಿ ಹಾಕೊಂಡು ಹೋದ್ರೆ, ರಾಜಕೀಯ ಪಕ್ಷವೇ ಅಶಿಸ್ತಾಗುತ್ತೆ. ಅಶಿಸ್ತಿಗೆ ಕಾಲಕಾಲಕ್ಕೆ ಔಷಧಿ, ಇಂಜೆಕ್ಷನ್ ಕೊಟ್ರೆ ಅದು ಗುಣವಾಗುತ್ತದೆ. ಅಂತಿಮ ಘಟ್ಟದಲ್ಲಿ ಯಾವ ಇಂಜೆಕ್ಷನ್ ಕೊಟ್ರೂ ಇಂಜೆಕ್ಷನೇ ರಿಯ್ಯಾಕ್ಷನ್ ಆಗುತ್ತೆ.
ಬಿಜೆಪಿಯಲ್ಲಿ ಅಶಿಸ್ತು 100% ಮಾತ್ರವಲ್ಲ, 200% ಕಾಣುತ್ತೆ. ಯಾರ್ಯಾರು ಅಶಿಸ್ತು ಮಾಡ್ತಿದ್ದಾರೆಂದು ಮಾಧ್ಯಮದ ಮೂಲಕವೇ ನೋಡ್ತಿದ್ದೇನೆ. ನನ್ನನ್ನು ಜನರು 2028ರ ವರೆಗೆ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಮುಂದೆ ಕಾಲ ನಿರ್ಣಯ ಮಾಡುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.