ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದು, ಸೆ.5ರಂದು ಮತದಾನ ನಡೆಯಲಿದೆ. ಆದರೆ ಹಲವು ರಾಜ್ಯಗಳಲ್ಲಿ ಈಗಾಗಲೇ ಆರಂಭಿಕ ಮತದಾನ ಪ್ರಕ್ರಿಯೆ ಆರಂಭವಾಗಿದೆ. ವಿಶೇಷವೆಂದರೆ ಚಿಕಾಗೋ ಸೇರಿ ಕೆಲ ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಯೋಜನೆಯ ಭಾಗವಾಗಿ ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ ಬ್ಯಾಲೆಟ್ ಪೇಪರ್ ಮುದ್ರಣದ ವ್ಯವಸ್ಥೆ ಮಾಡಲಾಗಿದೆ.
ಹೀಗೆ ಅವಕಾಶ ಇರುವ 12 ಭಾಷೆಗಳ ಪೈಕಿ ಭಾರತದ ಭಾರತೀಯರು ಬಳಸುವ ಹಿಂದಿ, ಉರ್ದು ಮತ್ತು ಗುಜರಾತಿ ಭಾಷೆ ಕೂಡಾ ಸೇರಿದೆ. ಅಮೆರಿಕದಲ್ಲಿ 50 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದು, ಈ ಪ್ರಮಾಣದ ಅಮೆರಿಕದ ಒಟ್ಟು ಜನಸಂಖ್ಯೆಯ ಶೇ.1ಕ್ಕಿಂತಲೂ ಹೆಚ್ಚಿದೆ.
ಹೀಗಾಗಿ ಯಾವುದೇ ಮತದಾರರು ಭಾಷೆ ಕಾರಣಕ್ಕೆ ಮತದಾನದಿಂದ ದೂರ ಉಳಿಯದಿರಲಿ ಎನ್ನುವ ಕಾರಣಕ್ಕೆ ಚಿಕಾಗೋದಲ್ಲಿ ಮತ ಕೇಂದ್ರಗಳಲ್ಲಿ ಹಿಂದಿ, ಗುಜರಾತಿ, ಉರ್ದು ಸೇರಿ 12 ಭಾಷೆ ಬಲ್ಲ ಚುನಾವಣಾ ಸಹಾಯಕರನ್ನು ನೇಮಿಸಲಾಗಿದೆ. ಜೊತೆಗೆ ಆರಂಭಿಕ ಮತದಾನದಲ್ಲಿ ಭಾಗಿಯಾಗುವವರಿಗೆ ಭಾಷೆ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಟಚ್‌ಸ್ಕ್ರೀನ್ ವೋಟಿಂಗ್ ಮಷಿನ್, ಆಡಿಯೋ ಬ್ಯಾಲೆಟ್ ಅವಕಾಶ ಕಲ್ಪಿಸಲಾಗಿದೆ ಇದನ್ನು ಬಳಸಿಕೊಂಡು ಮತದಾರರು ಹಿಂದಿ, ಗುಜರಾತಿ, ಉರ್ದು ಸೇರಿ 12 ಭಾಷೆಗಳಲ್ಲಿ ಬ್ಯಾಲೆಟ್ ಪೇಪರ್ ಮುದ್ರಣ ಮಾಡಿಕೊಂಡು ಮತದಾನ ಮಾಡಬಹುದಾಗಿದೆ. ಅಲ್ಲದೆ ಮತಕೇಂದ್ರಗಳನ್ನು ಗುರುತಿಸಲು ಅಲ್ಲಲ್ಲಿ ಹಾಕಿರುವ ಸೂಚನಾ ಫಲಕಗಳಲ್ಲಿ ಹಿಂದಿ ಭಾಷೆಯಲ್ಲೂ ಮಾಹಿತಿ ನೀಡಲಾಗಿದೆ.
ಯಾವ ಭಾಷೆ ಆಯ್ಕೆ ಲಭ್ಯ:
ಇಂಗ್ಲಿಷ್, ಸ್ಪಾನಿಷ್, ಮ್ಯಾಂಡರಿನ್, ಹಿಂದಿ, ಕೊರಿಯಾ, ತಗಲಾಗ್, ಪೊಲಿಷ್, ಗುಜರಾತಿ, ಉರ್ದು, ಉಜ್ಬೇಕಿಸ್ತಾನ, ಅರೇಬಿಕ್, ರಷ್ಯನ್.