ಲಖನೌ(ಉತ್ತರ ಪ್ರದೇಶ): ಭಾರತ ಮತ್ತು ಪಾಕಿಸ್ತಾನ ಅಕ್ಕಪಕ್ಕದ ದೇಶಗಳಾಗಿದ್ದು, ಗಡಿ ಸಮಸ್ಯೆಯ ಕಾರಣದಿಂದ ಪಾಕ್ ಆಗಾಗ ಕಾಲು ಕೆರೆದು ಜಗಳ ಬರುತ್ತಿರುತ್ತದೆ. ಇಂಥ ದ್ವೇಷಮಯ ವಾತಾವರಣದ ನಡುವೆಯೂ ಎರಡೂ ದೇಶಗಳ ಕುಟುಂಬಗಳ ನಡುವೆ ಸಂಬಂಧ ಏರ್ಪಟ್ಟಿದೆ.
ಹೌದು, ಪಾಕಿಸ್ತಾನಕ್ಕೆ ಹೋಗಲು ವೀಸಾ ಸಿಗದ ಕಾರಣ ಉತ್ತರ ಪ್ರದೇಶ ರಾಜ್ಯದ ಜೌನ್‌ಪುರ್ ಜಿಲ್ಲೆಯ ಬಿಜೆಪಿ ಕಾರ್ಪೋರೇಟರ್ ಮಗನೊಬ್ಬ ಆನ್‌ಲೈನ್‌ನಲ್ಲೇ ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿದ್ದಾನೆ.
ಬಿಜೆಪಿ ಕಾರ್ಪೋರೇಟರ್ ತೆಹ್ಸಿನ್ ಶಾಹಿದ್ ಅವರು ತಮ್ಮ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ವಿವಾಹವನ್ನು ಲಾಹೋರ್‌ನ ತಮ್ಮ ಸಂಬಂಧಿಕರ ಮಗಳಾದ ಆಂಡಲೀಬ್ ಜಹಾರಾ ಜತೆ ನಿಶ್ಚಯಿಸಿದ್ದರು.
ವರ್ಷದ ಹಿಂದೆಯೇ ವರನ ಕಡೆಯವರು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಿಕ್ಕಿರಲಿಲ್ಲ. ಹುಡುಗಿಯ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಶೀಘ್ರವೇ ಮದುವೆ ಮಾಡಿ ಮುಗಿಸಿಎ ಎಂದು ಒತ್ತಡ ಹೇರಿದ್ದರು. ಆದ್ದರಿಂದ ಆನ್‌ಲೈನ್‌ನಲ್ಲಿಯೇ ವಿವಾಹ ನಡೆಸಲಾಗಿದೆ.
ವರನ ಕಡೆಯ ಸಂಬಂಧಿಯೊಬ್ಬರು ವಧುವಿನ ಮನೆಯನ್ನು ತಲುಪಿದ್ದರು. ಬಳಿಕ ಅನೇಕ ಬಿಜೆಪಿ ನಾಯಕರೂ ಸೇರಿದಂತೆ ಎಲ್ಲ ಸಂಬಂಧಿಕರು ಮೊಬೈಲ್ ಮೂಲಕವೇ ವಿವಾಹಕ್ಕೆ ಸಾಕ್ಷಿಯಾಗಿರುವ ಅಪರೂಪದ ಘಟನೆ ನಡೆದಿದೆ