ಶಿವಮೊಗ್ಗ: ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಮನನೊಂದು ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಹೊಸನಗರ ತಾಲೂಕಿನ ಸುತ್ತಾ ಗ್ರಾಮದಲ್ಲಿ ನಡೆದಿದೆ.
ಮೇಲಿನಬೆಸಿಗೆ ಗ್ರಾಮ ಪಂಚಾಯತಿಯ ಸುತ್ತಾ ಗ್ರಾಮದ ಶಿಳ್ಳೆಕ್ಯಾತರ ಕ್ಯಾಂಪಿನ ಮಂಜುನಾಥ(25) ಮತ್ತು ಪತ್ನಿ ಅಮೃತ(21) ಮೃತ ದುರ್ದೈವಿಗಳು.
ಮಂಜುನಾಥ್ ಡಿ. 31ರ ಸಂಜೆ ಬೈಕಿನಲ್ಲಿ ಶಿಕಾರಿಪುರಕ್ಕೆ ಹೋಗಿದ್ದಾಗ ಬೈಕ್ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಿಗ್ಗೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಂಜುನಾಥ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಆತನ ಪತ್ನಿ ಅಮೃತ ಮನೆಯ ಶೆಡ್ಡಿನ ಜಂತಿಗೆ ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಮೃತ ಮೂಲತಃ ಮೈಸೂರಿನವಳಾಗಿದ್ದು ಮೂರು ವರ್ಷದ ಹಿಂದೆ ಮಂಜುನಾಥನನ್ನು ಪ್ರೀತಿಸಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ಘಟನೆ ವಿಷಯ ತಿಳಿದು ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.