ವಿಜಯನಗರ: ಪ್ರಿಯತಮೆಯ 7 ವರ್ಷದ ಮಗುವನ್ನು ಪ್ರಿಯಕರನೇ ಕಾಲುವೆಗೆ ಎಸೆದು ಹತ್ಯೆಗೈದಿರುವ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಸಪೇಟೆ ತಾಲ್ಲೂಕಿನ ಕಮಲಾಪುರ ಗ್ರಾಮದ ಅಭಿ(7) ಕೊಲೆಯಾದ ಬಾಲಕನಾಗಿದ್ದಾನೆ. ಓಬಳೇಶ(24) ಬಾಲಕನನ್ನು ಹತ್ಯೆಗೈದ ಆರೋಪಿ.
ಆರೋಪಿ ಓಬಳೇಶ ವಿವಾಹಿತ ಮಹಿಳೆಯೋರ್ವಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಆಕೆ ಗಂಡನನ್ನು ತೊರೆದು ತನ್ನ ಮಗುವಿನೊಂದಿಗೆ ಈತನೊಂದಿಗೇ ವಾಸವಾಗಿದ್ದಳು. ಮೂರು ದಿನಗಳ ಹಿಂದೆ ಶಾಲೆಗೆ ಹೋಗಿದ್ದ ಮಗುವನ್ನು ಕರೆದುಕೊಂಡು ಬರುವಂತೆ ಮಹಿಳೆ ಪ್ರಿಯಕರ ಓಬಳೇಶನಿಗೆ ತಿಳಿಸಿದ್ದಳು. ಬಳಿಕ ಮನೆಗೆ ವಾಪಸ್ಸಾಗಿದ್ದ ಓಬಳೇಶ ಮಗು ಕಾಣಿಯಾಗಿದ್ದಾಗಿ ಪ್ರೇಯಸಿ ಬಳಿ ತಿಳಿಸಿದ್ದ. ಬಳಿಕ ಇಬ್ಬರೂ ಮಗುವಿಗಾಗಿ ಹುಡುಕಾಟ ನಡೆಸಿದ್ದರೂ ಮಗು ಸಿಕ್ಕಿಲ್ಲವಾಗಿದ್ದು ಕಮಲಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ಪ್ರಕರಣ ತನಿಖೆಗೆ ಇಳಿದ ಪೊಲೀಸರಿಗೆ ಮಗುವನ್ನು ಶಾಲೆಯಿಂದ ಓಬಳೇಶ ಕರೆತಂದಿದ್ದ ಎನ್ನುವ ವಿಚಾರ ಪತ್ತೆಯಾಗಿತ್ತು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಪ್ರಕರಣ ಬಯಲಿಗೆ ಬಂದಿದೆ. ಓಬಳೇಶ ಶಾಲೆಯಿಂದ ಮಗುವನ್ನು ಕರೆತರುವಾಗಲೇ ಕಮಲಾಪುರದ ಎಚ್ಎಲ್‌ಸಿ ಕಾಲುವೆಗೆ ಮಗುವನ್ನು ಎಸೆದು ಹತ್ಯೆಗೈದಿದ್ದು, ಮನೆಗೆ ಬಂದು ಪ್ರಿಯತಮೆಯ ಬಳಿ ಮಗು ಕಾಣೆಯಾಗಿದ್ದಾಗಿ ಸುಳ್ಳು ಹೇಳಿದ್ದ. ಈ ವೇಳೆ ಮಗು ಪ್ರಿಯತಮೆಯ ಮೊದಲ ಗಂಡನಿಗೆ ಜನಿಸಿದ್ದಾಗಿದ್ದರಿಂದಲೇ ಹತ್ಯೆ ಮಾಡಿದ್ದಾಗಿ ಓಬಳೇಶ ಹೇಳಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.