ಬೆಳಗಾವಿ: ಜಿಲ್ಲೆಯ ಬಾಳೆಕುಂದ್ರಿ ಗ್ರಾಮದಲ್ಲಿ ಪ್ರಯಾಣಿಕರ ಭಾಷೆಯಲ್ಲಿ ಮರಾಠಿ ಮಾತನಾಡಲು ಸಾಧ್ಯವಾಗದ ಕಾರಣ ಪ್ರಯಾಣಿಕರನ್ನು ಕನ್ನಡದಲ್ಲಿ ಮಾತನಾಡುವಂತೆ ಹೇಳಿ ಎನ್ಡಬ್ಲ್ಯೂಕೆಆರ್ಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಂಡಕ್ಟರ್ ಮಹಾದೇವ್ ಹುಕ್ಕೇರಿ ಮತ್ತು ಚಾಲಕ ಖತಾಲ್ ಮೊಮಿನ್ ಅವರ ಮೇಲೆ ಶುಕ್ರವಾರ ಬಾಳೆಕುಂದ್ರಿ ಗ್ರಾಮದಲ್ಲಿ ಮರಾಠಿ ಯುವಕರ ಗುಂಪು ಹಲ್ಲೆ ನಡೆಸಿದೆ.
ಗ್ರಾಮೀಣ ಸಿಬಿಟಿ-ಸೂಳೇಭಾವಿ ಬಸ್ ಹತ್ತಿದ ಹುಡುಗಿಯೊಬ್ಬರಿಗೆ ಮರಾಠಿ ಅರ್ಥವಾಗದ ಕಂಡಕ್ಟರ್ ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದ. ಈ ವೇಳೆ ಬಸ್ ನಲ್ಲಿದ್ದ ಯುವಕರ ಗುಂಪು ಕನ್ನಡ ಮಾತನಾಡಲು ಹೇಳಿದ್ದಕ್ಕೆ ಕಂಡಕ್ಟರ್ ಗೆ ಮನಬಂದಂತೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು. ಬಸ್ ನಿಂದ ಕೆಳಗಿಳಿಸಿ ಕಾಲರ್ ಪಟ್ಟಿ ಹಿಡಿದು ಕಂಡಕ್ಟರ್ ನನ್ನು ಎಳೆದಾಡಿ ಥಳಿಸಿದ್ದರು.
ಈ ಸಂಬಂಧ ಚಾಲಕ ನಿರ್ವಾಹಕರಿಂದ ದಾಖಲಾದ ದೂರಿನನ್ವಯ ಮಾರಿಹಾಳ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಶುಕ್ರವಾರ ತಡರಾತ್ರಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇತರರಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ. ಬಾಳೆಕುಂದ್ರಿ ಗ್ರಾಮದ ಮಾರುತಿ ತುರ್ಮುರಿ, ಬಾಲು ಗೊಜ್ಗೇಕರ್ ಮತ್ತು ರಾಹುಲ್ ನಾಯ್ಡು ಎಂದು ಆರೋಪಿಗಳನ್ನು ಗುರುತಿಸಲಾಗಿದೆ.
ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು ಮತ್ತು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.