ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿ ಹಾಗೂ ಅವರ ಪತ್ನಿ ತಮ್ಮ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಸಾಫ್ಟ್ವೇರ್ ಉದ್ಯೋಗಿ 38 ವರ್ಷದ ಅನೂಪ್, ಅವರ ಪತ್ನಿ 35 ವರ್ಷದ ರಾಖಿ, ಅವರ ಮಕ್ಕಳಾದ ಐದು ವರ್ಷದ ಅನುಪ್ರಿಯಾ ಮತ್ತು ಎರಡು ವರ್ಷದ ಪ್ರಿಯಾಂಶ್ ಎಂದು ಗುರುತಿಸಲಾಗಿದೆ.
ದಂಪತಿಗಳ ಹಿರಿಯ ಮಗಳು ಅನುಪ್ರಿಯಾ ವಿಶೇಷ ಅಗತ್ಯವಿರುವ ಮಗುವಾಗಿದ್ದ ಕಾರಣ, ಪೋಷಕರು ಸಾಕಷ್ಟು ಚಿಂತೆಯಲ್ಲಿದ್ದರು ಎಂದು ಮನೆಕೆಲಸಗಾರ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರ ಪ್ರಕಾರ, ಅನೂಪ್ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿಯವರೆಗೆ ಎಲ್ಲವೂ ಸಾಮಾನ್ಯವಾಗಿತ್ತು ಮತ್ತು ದಂಪತಿಗಳು ಸಂತೋಷವಾಗಿದ್ದರು ಎಂದು ಮನೆಕೆಲಸಗಾರ ಪೊಲೀಸರಿಗೆ ತಿಳಿಸಿದ್ದಾನೆ. ಸೋಮವಾರ ಬೆಳಿಗ್ಗೆ ಮನೆಯ ಸಹಾಯಕರು ಬಂದಾಗ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕೊಲೆ ಮತ್ತು ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಅನುಪ್ರಿಯಾಳ ಸ್ಥಿತಿಯಿಂದ ಖಿನ್ನತೆಗೆ ಒಳಗಾದ ದಂಪತಿಗಳು ಅದಕ್ಕೂ ಮೊದಲು ತಮ್ಮ ಜೀವನವನ್ನು ಕೊನೆಗೊಳಿಸಲು ಮತ್ತು ತಮ್ಮ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅವರು ಮೊದಲು ತಮ್ಮ ಮಕ್ಕಳ ಆಹಾರದಲ್ಲಿ ವಿಷ ಬೆರೆಸಿ ಕೊಂದಿದ್ದರು ಮತ್ತು ನಂತರ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಟುಂಬವು ಮೂವರು ಮನೆಗೆಲಸದವರನ್ನು ಇರಿಸಿಕೊಂಡಿದ್ದು, ಅವರು ಪಾಂಡಿಚೇರಿಗೆ ಭೇಟಿ ನೀಡಲು ಯೋಜಿಸುತ್ತಿದ್ದ ಕಾರಣ ಅನೂಪ್ ಮನೆಗೆಲಸದವರನ್ನು ಸೋಮವಾರ ಮುಂಜಾನೆ ಬರುವಂತೆ ಹೇಳಿದ್ದರು.
ಈ ದಂಪತಿ ಭಾನುವಾರವೇ ಸಿಬ್ಬಂದಿಗಳಿಂದ ಪ್ಯಾಕಿಂಗ್ ಮಾಡಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಸಿಬ್ಬಂದಿಯನ್ನು ಅಡುಗೆಗಾಗಿ ನೇಮಿಸಲಾಯಿತು ಮತ್ತು ಒಬ್ಬರನ್ನು ಮಕ್ಕಳನ್ನು ನೋಡಿಕೊಳ್ಳಲು ಇರಿಸಲಾಗಿತ್ತು. ಕುಟುಂಬವು ಆರ್ಥಿಕವಾಗಿ ಸದೃಢವಾಗಿರುವುದರಿಂದ ಸಹಾಯಕರಿಗೆ ತಲಾ 15,000 ರೂಪಾಯಿ ವೇತನ ದೊರೆಯುತ್ತಿತ್ತು.
ಆದಾಗ್ಯೂ, ಸದಾಶಿವನಗರ ಪೊಲೀಸರು ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದು, ಕುಟುಂಬವು ಸಾಲದ ಸುಳಿಗೆ ಸಿಲುಕಿದೆಯೇ ಅಥವಾ ಕಠಿಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.