ಶಿರಸಿ: ನಗರದಲ್ಲಿ 2017ರಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಿಬ್ಬರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಮಧ್ಯಪ್ರದೇಶ ಮೂಲದ ಬಹೂದ್ದೂರ್ ಸಿಂಗ್ ಮತ್ತು ಸೂರಬ್ ದರೋಡೆ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
ಕಳೆದ 2017ರಲ್ಲಿ ದಾವಣಗೆರೆ ಜೈಲಿನಿಂದ ಪರಾರಿಯಾಗಿದ್ದ ಈ ಇಬ್ಬರೂ ಅಪರಾಧಿಗಳು ಶಿರಸಿ ನಗರದ ವಿದ್ಯಾನಗರ ಮತ್ತು ಸಹ್ಯಾದ್ರಿ ಕಾಲೋನಿಯಲ್ಲಿ ಮನೆ ದರೋಡೆ ನಡೆಸಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಐ ಕು.ರತ್ನಾ ಕುರಿ ಮತ್ತು ಅವರ ತಂಡದ ಸಿಬ್ಬಂದಿಗಳಾದ ರವಿ ಗಾಂಜೆಕರ್, ಮೋಹನ್ ನಾಯ್ಕ, ವಿನಾಯಕ ಗೌಡ, ಹನುಮಂತ ಕೋಲಾರ ಹಾಗೂ ನಾಗೇಂದ್ರ ನಾಯ್ಕ ಆರೋಪಿಗಳನ್ನು ಪತ್ತೆಹಚ್ಚಿ ಮಧ್ಯಪ್ರದೇಶದಿಂದ ಬಂಧಿಸಿ ಕರೆತಂದಿದ್ದರು.
ಸರ್ಕಾರಿ ಅಭಿಯೋಜಕರಾದ ರಾಜೇಶ.ಎಂ.ಮಳಗಿಕರ್ ಅವರು ಸುದೀರ್ಘವಾಗಿ ತಮ್ಮ ಸಮರ್ಥವಾದ ವಾದವನ್ನು ಮಂಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ದರೋಡೆ ನಡೆಸಿದ್ದ ಆರೋಪಿಗಳು ಅಪರಾಧಿಗಳೆಂದು ಸಾಬೀತಾದ ಹಿನ್ನಲೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.