ಸಿದ್ದಾಪುರ: ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿ, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದ ಆರೋಪ ಹೊರಿಸಿ ಪ್ರತಿಭಟಿಸಿದ ಘಟನೆ ಸಿದ್ದಾಪುರ ತಾಲ್ಲೂಕು ಆಸ್ಪತ್ರೆ ಎದುರು ನಡೆದಿದೆ. ಜ್ಯೋತಿ ರವಿ ನಾಯ್ಕ ಮೃತ ಬಾಣಂತಿ ಮಹಿಳೆಯಾಗಿದ್ದಾಳೆ.
ತಾಲ್ಲೂಕಿನ ಬಿಳಗಿಯ ಕಾನಳ್ಳಿ ಗ್ರಾಮದ ಜ್ಯೋತಿ ಹೆರಿಗೆಗೆಂದು ಸಿದ್ದಾಪುರದ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಳು. ಸಹಜ ಹೆರಿಗೆ ಸಾಧ್ಯವಿಲ್ಲವೆಂದು ಸ್ತ್ರೀರೋಗ ತಜ್ಞ ರವಿರಾಜ ಶೇಟ್ ಸಿಜೇರಿಯನ್ ಹೆರಿಗೆ ಸೂಚಿಸಿದ್ದು, ಅದರಂತೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು. ಆದರೆ ಸಿಜೇರಿಯನ್ ಹೆರಿಗೆ ವೇಳೆ ಮಗು ಬದುಕುಳಿದಿದ್ದು, ಬಾಣಂತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಬಾಣಂತಿ ಸಾವನ್ನಪ್ಪಿದ ಹಿನ್ನಲೆ ಜ್ಯೋತಿ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಎದುರು ಕುಟುಂಬಸ್ಥರೊಂದಿಗೆ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದು, ಬಾಣಂತಿ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.