ರಾಮನಗರ: ಎರಡು ದಿನದ ಹಿಂದೆ ಜನಿಸಿದ ಮಗುವನ್ನು ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಬಿಸಾಡಿ ಹೋಗಿರುವ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ಟಾಯ್ಲೆಟ್ ಬ್ಲಾಕ್ ಆದ ಹಿನ್ನಲೆ ಸ್ವಚ್ಛತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಈ ವೇಳೆ ನವಜಾತ ಶಿಶುವಿನ ಮೃತದೇಹ ಇರುವುದು ಪತ್ತೆಯಾಗಿದೆ. ಗಂಡು ನವಜಾತ ಶಿಶು ಇದಾಗಿದ್ದು, ತಾಯಿಯೇ ಮಗುವನ್ನು ಟಾಯ್ಲೆಟ್‌ನಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಗುವಿನ ತಾಯಿ ಯಾರು ಎನ್ನುವುದು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯ ಎಸಗಿದವರ ಪತ್ತೆಗೆ ತನಿಖೆ ಮುಂದುವರೆಸಿದ್ದು, ಆಸ್ಪತ್ರೆಯಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.