ದಾವಣಗೆರೆ ತಾಲ್ಲೂಕಿನ 70375 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ

ದಾವಣಗೆರೆ ಫೆ. 16 :ದಾವಣಗೆರೆ ತಾಲ್ಲೂಕಿನಲ್ಲಿ ಫೆ. 27 ರಿಂದ ಮಾರ್ಚ್ 02 ರವರೆಗೆ ನಾಲ್ಕು ದಿನಗಳ ಕಾಲ, ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನ ಐದು ವರ್ಷದೊಳಗಿನ 70375…

Pulse polio vaccine vijayaprabha news

ದಾವಣಗೆರೆ ಫೆ. 16 :ದಾವಣಗೆರೆ ತಾಲ್ಲೂಕಿನಲ್ಲಿ ಫೆ. 27 ರಿಂದ ಮಾರ್ಚ್ 02 ರವರೆಗೆ ನಾಲ್ಕು ದಿನಗಳ ಕಾಲ, ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನ ಐದು ವರ್ಷದೊಳಗಿನ 70375 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ತಪ್ಪದೆ ಸಾಧಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ತಹಸಿಲ್ದಾರ್ ಬಿ.ಎನ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಿದ್ಧತೆಗಾಗಿ ಏರ್ಪಡಿಸಲಾದ ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಫೆ. 27 ರಿಂದ ಮಾ. 02 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲ ಗ್ರಾಮ ಪಂಚಾಯತಿಗಳು ಸಹಕರಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಲಸಿಕಾ ಕಾರ್ಯಕ್ರಮದ ಮೊದಲನೇ ದಿನ ಶಾಲೆಯ ಮಕ್ಕಳಿಂದ ಪಲ್ಸ್-ಪೋಲಿಯೊ ಲಸಿಕಾ ಕಾರ್ಯಕ್ರಮ ಕುರಿತ ಜಾಗೃತಿ ಜಾಥಾ ಮಾಡಿಸಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಲಸಿಕಾ ಕಾರ್ಯಕ್ರಮ ಕುರಿತು ಟಾಂ ಟಾಂ ಹಾಕಿಸಬೇಕು, ಅಲ್ಲದೆ ಎಲ್ಲ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತಿಗಳಲ್ಲಿ ಆಯಾ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳ ಮೂಲಕ ಲಸಿಕಾ ಕಾರ್ಯಕ್ರಮ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ವ್ಯಾಪ್ತಿಯಲ್ಲಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಬೇಕು. ಅಲೆಮಾರಿ ಕುಟುಂಬಗಳು, ಇಟ್ಟಿಗೆ ಭಟ್ಟಿ, ಸ್ಲಂಗಳು ಮುಂತಾದ ಪ್ರದೇಶಗಳಲ್ಲಿನ 5 ವರ್ಷದೊಳಗಿನ ಮಕ್ಕಳಿಗೂ ಸಹ ತಪ್ಪದೆ ಲಸಿಕೆ ಹಾಕಲು ಕಾರ್ಯತಂತ್ರ ರೂಪಿಸಬೇಕು. ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು ಎಂದು ತಹಸಿಲ್ದಾರ್ ಗಿರೀಶ್ ಹೇಳಿದರು.

Vijayaprabha Mobile App free

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಲಸಿಕೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಪ್ರಸಕ್ತ ಸಾಲಿನ ಈ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜೀವರಕ್ಷಕ ಪೋಲಿಯೊ ಹಾಕಲಾಗುವುದು. ಕ್ರಿಯಾ ಯೋಜನೆಯ ಪ್ರಕಾರ ತಾಲ್ಲೂಕಿನಲ್ಲಿ 0-5 ವರ್ಷದೊಳಗಿನ ಮಕ್ಕಳ ಸಂಖ್ಯೆ 70375 ಇದ್ದು, ಈ ಪೈಕಿ ನಗರ-45563 ಹಾಗೂ ಗ್ರಾಮೀಣ ಪ್ರದೇಶದಲ್ಲಿ 24812 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಲಸಿಕಾ ಕಾರ್ಯಕ್ರಮದ ಮೊದಲ ದಿನದಂದೇ ಶೇ 90 ರಷ್ಟು ಮಕ್ಕಳಿಗೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು, ಉಳಿದ ಮಕ್ಕಳಿಗೆ ಮನೆ ಮನೆ ಭೇಟಿ ನೀಡಿ ನಮ್ಮ ತಂಡವು ಲಸಿಕೆ ನೀಡಲಿದೆ. ತಾಲ್ಲೂಕಿನಲ್ಲಿ 423 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಮಕ್ಕಳಿಗೆ ಮನೆ ಮನೆ ಭೇಟಿ, ಲಸಿಕಾ ಕೇಂದ್ರಗಳು ಹಾಗೂ ಸಂಚಾರಿ ತಂಡ ಸೇರಿದಂತೆ ಒಟ್ಟು 444 ತಂಡಗಳನ್ನು ರಚಿಸಲಾಗಿದ್ದು, ಒಟ್ಟು 860 ಲಸಿಕಾಕರ್ತರು, 85 ಆರೋಗ್ಯ ಮೇಲ್ವಿಚಾರಕರು ಕ್ಷೇತ್ರದಲ್ಲಿ ಕಾರ್ಯನಿರ್ವಸಲಿದ್ದಾರೆ ಎಂದರು.

ಸಭೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ. ನೀಲಕಂಠ ನಾಯಕ್, ದಾವಣಗೆರೆಯ ಎಲ್ಲ 09 ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯಲ್ಲಿ ಫೆ. 27 ರಿಂದ ಮಾರ್ಚ್ 02 ರವರೆಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಕುರಿತು ಪಾಲಿಕೆಯ ಸಭಾಂಗಣದಲ್ಲಿ ಸಿದ್ಧತಾ ಸಭೆಯನ್ನು ಜರುಗಿಸಲಾಯಿತು. ನಗರಪಾಲಿಕೆ ಆರೋಗ್ಯ ಅಧಿಕಾರಿ ಡಾ. ಸುಧೀಂದ್ರ, ನಗರಪಾಲಿಕೆಯ ಎಲ್ಲ ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ನಿರ್ಣಯಗಳನ್ನು ಇದೇ ಸಂದರ್ಭದಲ್ಲಿ ಕೈಗೊಳ್ಳಲಾಯಿತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.