ಶಿವಮೊಗ್ಗ: ಜಿಲ್ಲೆಯ ತ್ಯಾವರೆಕೊಪ್ಪ ಹುಲಿ ಅಭಯಾರಣ್ಯಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತನ್ನ ತಾಯಿಯಿಂದ ಬೇರ್ಪಟ್ಟ ಹೆಣ್ಣು ಕಪ್ಪು ಚಿರತೆ ಮರಿಯನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಕರೆತರಲಾಗಿದ್ದು, ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಮಟಾ ತಾಲ್ಲೂಕಿನ ಕತಗಾಲ ಅರಣ್ಯ ವಲಯದಲ್ಲಿ ಎರಡು ವರ್ಷದ ಕಪ್ಪು ಚಿರತೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಸೇತುವೆಯ ಬಳಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿತ್ತು. ಚಿರತೆಯ ಸ್ಥಿತಿಯ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತ್ಯಾವರೆಕೊಪ್ಪ ಹುಲಿ ಅಭಯಾರಣ್ಯಕ್ಕೆ ಮಾಹಿತಿ ನೀಡಿದರು.
ಡಿಸಿಎಫ್ ಯೋಗೀಶ್ ಮತ್ತು ಅವರ ತಂಡವು ಕತಗಾಲ ಅರಣ್ಯ ವಲಯಕ್ಕೆ ಹೋಗಿ ಕಪ್ಪು ಚಿರತೆ ಮರಿಗಳನ್ನು ರಕ್ಷಿಸಿತು. ತ್ಯಾವರೆಕೊಪ್ಪ ಹುಲಿ ಅಭಯಾರಣ್ಯದಲ್ಲಿ ಈಗಾಗಲೇ ಮಿಂಚು ಎಂಬ ಕಪ್ಪು ಚಿರತೆ ಇದ್ದು ಇದೀಗ ಮತ್ತೊಂದು ಕರಿ ಚಿರತೆಯನ್ನು ಸೇರಿಸಿದಂತಾಗಿದೆ.