ದಾವಣಗೆರೆ :ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 12 ರಿಂದ 28 ರವರೆಗೆ 14 ದಿನಗಳ ಕಾಲ ಸಕ್ರಿಯ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ-2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಮುರಳೀಧರ್ ಪಿ.ಡಿ ತಿಳಿಸಿದ್ದಾರೆ.
ಕುಷ್ಠರೋಗ ಪ್ರಕರಣಗಳನ್ನು ಸಮೀಕ್ಷೆ ನಡೆಸಲು ಒಟ್ಟು 1031 ಸಮೀಕ್ಷಾ ತಂಡಗಳನ್ನು ರಚಿಸಲಾಗಿದೆ, ಪ್ರತಿ ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಹಾಗೂ ಓರ್ವ ಪುರುಷ ಸ್ವಯಂ ಸೇವಕ ಇದ್ದು, ತಂಡವು 14 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡುವ ಮೂಲಕ ಕುಟುಂಬದಲ್ಲಿನ ಎಲ್ಲಾ ಸದಸ್ಯರನ್ನು ಕುಷ್ಠರೋಗದ ಲಕ್ಷಣಗಳಿಗಾಗಿ ದೈಹಿಕ ತಪಾಸಣೆ ನಡೆಸಿ, ಶಂಕಿತ ಪ್ರಕರಣಗಳನ್ನು ಪತ್ತೆ ಹಚ್ಚಿ ವೈದ್ಯರಲ್ಲಿಗೆ ಕಳುಹಿಸಿ ಪರೀಕ್ಷೆಗೊಳಪಡಿಸಲಿದ್ದಾರೆ.
ಕುಷ್ಠರೋಗವು ಚರ್ಮ ಹಾಗೂ ನರಗಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು ವ್ಯಕ್ತಿಯ ಮೈಮೇಲೆ ಯಾವುದೇ ರೀತಿಯ ತಿಳಿ, ಬಿಳಿ ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು, ಮುಖದ ಮೇಲೆ ಎಣ್ಣೆ ಸವರಿದಂಥ ಹೊಳಪು, ಕಿವಿಯ ಮೇಲೆ ಗಂಟುಗಳು, ಕಣ್ಣು ಉಬ್ಬಿನ ಮೇಲೆ ಕೂದಲು ಇಲ್ಲದಿರುವುದು, ಅಂಗೈ ಮತ್ತು ಅಂಗಾಲುಗಳಲ್ಲಿ ಬಿಸಿ ಅಥವಾ ತಂಪಿನ ಅನುಭವ ಆಗದೇ ಇರುವುದು, ಕೈಕಾಲುಗಳಲ್ಲಿ ಹುಣ್ಣು ಅಥವಾ ಗಾಯಗಳು ಮತ್ತು ಸದಾಕಾಲ ಜೋಮು ಇರುವುದು, ಕೈ ಅಥವಾ ಕಾಲಿನ ಬೆರಳುಗಳು ಮಡಚಿಕೊಂಡಿರುವುದು, ಪಾದಗಳು ಬಿದ್ದು ಹೋಗಿರುವುದು ಇವೆಲ್ಲವೂ ಕುಷ್ಠರೋಗದ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕುಷ್ಠರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಬರುವ ಖಾಯಿಲೆ. ಇದು ನಿಧಾನಗತಿಯಲ್ಲಿ ಹರಡುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸೋಂಕಿತ ವ್ಯಕ್ತಿಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಅವನ ರೋಗನಿರೋಧಕ ಶಕ್ತಿಯನ್ನಾಧರಿಸಿ 2 ರಿಂದ 8 ವರ್ಷಗಳು ಬೇಕಾಗಬಹುದು. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಹಾಗೂ ಸೀನಿದಾಗ ಗಾಳಿಯ ಮೂಲಕ ಬಾಯಿಂದಲೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಕುಷ್ಠರೋಗದಲ್ಲಿ ಪಿ.ಬಿ ಮತ್ತು ಎಂ.ಬಿ ಎಂಬ ಎರಡು ವಿಧಗಳಿದ್ದು, ಪಿ.ಬಿ ಕುಷ್ಠರೋಗವು ರೋಗದ ಆರಂಭಿಕ ಹಂತವಾಗಿದೆ. 6 ತಿಂಗಳ ಎಂ.ಡಿ.ಟಿ ಚಿಕಿತ್ಸೆ ಪಡೆಯುವ ಮೂಲಕ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಎಂ.ಬಿ ಕುಷ್ಠರೋಗವು ನಂತರದ ಹಂತವಾಗಿದ್ದು 12 ತಿಂಗಳ ಎಂ.ಡಿ.ಟಿ ಚಿಕಿತ್ಸೆ ಪಡೆಯುವ ಮೂಲಕ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮೇಲಿನ ಎರಡೂ ಹಂತದಲ್ಲಿ ಕುಷ್ಠರೋಗವು ಪತ್ತೆಯಾಗದಿದ್ದಲ್ಲಿ ರೋಗಿಗಳು ಅಂಗವಿಕಲತೆಗೆ (ಗ್ರೇಡ್-2) ಒಳಗಾಗುತ್ತಾರೆ. ಕುಷ್ಠರೋಗವು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಖಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದಾಗಿದೆ.
ಆದ್ದರಿಂದ ಆರೋಗ್ಯ ಇಲಾಖೆಯ ತಂಡದವರು ಸಮೀಕ್ಷೆಗಾಗಿ ತಮ್ಮ ಮನೆಗಳಿಗೆ ಬಂದಾಗ ಕುಷ್ಠರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಸಲುವಾಗಿ ಎಲ್ಲರೂ ತಪಾಸಣೆಗೆ ಒಳಪಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ದಾವಣಗೆರೆ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.