ಹೊಸಪೇಟೆ(ವಿಜಯನಗರ): ಇತ್ತೀಚೆಗೆ ಸುರಿದ ಮಳೆಯಿಂದ ಮರಿಯಮ್ಮನಹಳ್ಳಿ ಸಮೀಪದ ಡಣನಾಯಕನಕೆರೆ ಗ್ರಾಮದ ಕೆರೆ ಕೋಡಿ ಬಿದ್ದು, ಸುಮಾರು 120 ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿರುವ ಪ್ರದೇಶಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದ ಬೆಳೆಹಾನಿಯಾಗಿರುವ ಪ್ರದೇಶವನ್ನು ಪರಿಶೀಲಿಸಿದ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸ್ಥಳದಲ್ಲಿದ್ದ ರೈತರ ಅಹವಾಲುಗಳನ್ನು ಇದೇ ಸಂದರ್ಭದಲ್ಲಿ ಆಲಿಸಿದರು ಮತ್ತು ರೈತರಿಗೆ ಸರಕಾರ ನಿಮ್ಮೊಂದಿಗಿದೆ;ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಧೈರ್ಯ ತುಂಬಿದರು.
ಇದಕ್ಕೂ ಮುಂಚೆ ಅವರು ಡಣನಾಯಕನಕೆರೆ ಕೆರೆಗೆ ಭೇಟಿ ನೀಡಿ ಕೆರೆ ವೀಕ್ಷಿಸಿದರು ಹಾಗೂ ಪೂಜೆ ಸಲ್ಲಿಸಿ ಗಂಗಾಮಾತೆಗೆ ನಮನ ಸಲ್ಲಿಸಿದ್ದು, ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸನ್ಮಾನಿಸಿದರು ಮತ್ತು ಕೆಲ ಬೇಡಿಕೆಗಳು ಈಡೇರಿಸುವಂತೆ ಮನವಿ ಸಲ್ಲಿಸಿದರು.
ನಂತರ ಸಚಿವರು ಮರಿಯಮ್ಮನಹಳ್ಳಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಜಿಲ್ಲಾ ರಸ್ತೆ ಮಳೆಯಿಂದ ಹಾನಿಗೊಳಗಾಗಿರುವುದನ್ನು ಪರಿಶೀಲಿಸಿದ್ದು, ನಂತರ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಿಯಮ್ಮನಹಳ್ಳಿ ಬಳಿ ನಡೆಯುತ್ತಿರುವ ಪಾವಗಡ ಕುಡಿಯುವ ನೀರಿನ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಪಂ ಸಿಇಒ ಹರ್ಷಲ್ ಭೋಯರ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಮಾಜಿ ಶಾಸಕ ನೇಮಿರಾಜ್ ನಾಯಕ್ ಸೇರಿದಂತೆಅನೇಕರುಇದ್ದರು.