ಕಾಸರಗೋಡು: ಕೆಲ ದಿನಗಳ ಹಿಂದೆ ಮನೆಯಿಂದ ಏಕಾಏಕಿ ಕಾಣೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಟೋ ಚಾಲಕ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ಬಳಿ ಆಟೋ ಚಾಲಕ ಪ್ರದೀಪ್(42) ಮತ್ತು 15 ವರ್ಷದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರದೀಪ್ ಆಗಾಗ ಅಪ್ರಾಪ್ತೆಯ ಮನೆಗೆ ಭೇಟಿ ನೀಡುತ್ತಿದ್ದನು. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಫೆಬ್ರವರಿ 11ರ ರಾತ್ರಿ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ನಿವಾಸಿಗಳಾದ ಪ್ರದೀಪ್ ಮತ್ತು ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಬಾಲಕಿಯ ತಾಯಿ ಕುಂಬ್ಳೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದರೂ ಅವರಿಬ್ಬರೂ ಪತ್ತೆಯಾಗಿಲ್ಲ. ಪೋಷಕರು ಹೈಕೋರ್ಟ್ ಮೊರೆ ಹೋಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪೊಲೀಸರು, ಸ್ಥಳೀಯರ ಸಹಾಯದಿಂದ ಶೋಧ ನಡೆಸಿದಾಗ, ಇಬ್ಬರ ಶವಗಳು ಅಕೇಶಿಯ ಕಾಡಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮನೆಯವರಿಗೆ ಹೆದರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅಥವಾ ಬೇರೆ ಯಾವುದಾದರೂ ಕಾರಣವಿತ್ತಾ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. ಈ ಸಂಬಂಧ ಕಾಸರಗೋಡು ಜಿಲ್ಲೆಯ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.