ಬಳ್ಳಾರಿ,ಜ.24: ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ 2021-22 ನೇ ಸಾಲಿನ ಮುಂಗಾರು / ಹಿಂಗಾರು ಋತುವಿನಲ್ಲಿ ಬೆಳೆದ ಭತ್ತ ಮತ್ತು ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರ್ಚ್ 31 ರವರೆಗೆ ಸರ್ಕಾರದಿಂದ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಬಳ್ಳಾರಿ, ಸಿರುಗುಪ್ಪ, ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿನ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿರುವ ಖರೀದಿ ಕೇಂದ್ರಗಳಲ್ಲಿ ಭಾರತ ಸರ್ಕಾರ ನಿಗಧಿಪಡಿಸಿದ ನಿರ್ದಿಷ್ಟತೆಗಳಂತೆ ಹೊಂದಿರುವ ಎಫ್‍ಎಕ್ಯೂ ಗುಣಮಟ್ಟದ ಭತ್ತ ಮತ್ತು ಜೋಳವನ್ನು ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ರೂ.1940, ಗ್ರೇಡ್ ‘ಎ’ ಭತ್ತಕ್ಕೆ ರೂ.1960, ಪ್ರತಿ ಕ್ವಿಂಟಾಲ್ ಹೈಬ್ರಿಡ್ ಜೋಳಕ್ಕೆ ರೂ.2738, ಮಾಲ್ದಂಡಿ ಜೋಳಕ್ಕೆ ರೂ.2758. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಲ್‍ರಂತೆ ಗರಿಷ್ಠ 40 ಕ್ವಿಂಟಲ್ ಭತ್ತ, ಹಾಗೂ ಪ್ರತಿ ಎಕರೆಗೆ 10 ಕ್ವಿಂಟಲ್‍ರಂತೆ ಗರಿಷ್ಠ 20 ಕ್ವಿಂಟಲ್ ಜೋಳವನ್ನು ಖರೀದಿಸಲಾಗುವುದು. ಮಾ.31ರವರೆಗೆ ನೊಂದಾಯಿತ ರೈತರಿಂದ ಭತ್ತ ಮತ್ತು ಜೋಳವನ್ನು ಖರೀದಿಸಲಾಗುವುದು.
ರೈತರಿಗೆ ಹೆಚ್ಚಿನ ಮಾಹಿತಿಗಾಗಿ ಖರೀದಿ ಏಜೆನ್ಸಿಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ನಿಯಮಿತ(ಮೊ :9448275015/7483049911) ಬಳ್ಳಾರಿ ಜಿಲ್ಲಾ ಕಛೇರಿ ಹಾಗೂ ಆಯಾ ತಾಲ್ಲೂಕಿನ ಖರೀದಿ ಕೇಂದ್ರಗಳ ಖರೀದಿ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದಾಗಿದೆ.