ಕಾರವಾರ: ನಕಲಿ ತುಪ್ಪ ಮಾರಾಟಮಾಡುತ್ತಿದ್ದಾನೆಂಬ ಸಂಶಯದ ಮೇಲೆ ಗ್ರಾಮಸ್ಥರು ತುಪ್ಪ ಮಾರಾಟಗಾರನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ಶಿರಸಿ ತಾಲೂಕಿನ ಇಟಗುಳಿ ಪಂಚಾಯತಿಯಲ್ಲಿ ನಡೆದಿದೆ.
ಬಳ್ಳಾರಿಯ ಮಲ್ಲನಗೌಡಾ ತುಪ್ಪ ಮಾರಾಟಗಾರನಾಗಿದ್ದು ಈತ ಹಾಗು ಈತನ ಸಂಗಡಿಗರು ಶಿರಸಿಯ ಗಾಂಧಿನಗರದಲ್ಲಿರುವ ಗೊನ್ಸಾಲವಿಸ್ ಎಂಬುವರ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ದಾಲ್ಡಾದಿಂದ ತಯಾರಿಸಿದ ತುಪ್ಪವನ್ನು ಅಸಲಿ ತುಪ್ಪವೆಂದು ಕೆ.ಜಿ.ಗೆ 250 ರೂ ನಂತೆ ಮಾರುತ್ತಿದ್ದರು.
ಮಲ್ಲನಗೌಡಾ ತಂಡದವರು ಕಳೆದೊಂದು ವರ್ಷದಿಂದ ಇದೇ ರೀತಿಯಾಗಿ ತುಪ್ಪ ಮಾರಾಟ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಮಲ್ಲನಗೌಡಾ ಯಾವುದೇ ಲೇಬಲ್ ಇಲ್ಲದ ಪ್ಲಾಸ್ಟಿಕ್ ಡಬ್ಬದಲ್ಲಿ ತುಪ್ಪ ತುಂಬಿಕೊಂಡು ಇಟಗುಳಿ ಪಂಚಾಯತಿ ವ್ಯಾಪ್ತಿಯಲ್ಲಿ ಮಾರಾಟ ಮಾಡಿದ್ದಾನೆ. ಆ ಸಂದರ್ಭದಲ್ಲಿ ಇಟುಗುಳಿ ಪಂಚಾಯತಿ ಸದಸ್ಯೆ ಗೀತಾ ಬೋವಿ ಸೇರಿದಂತೆ ಅನೇಕ ಗ್ರಾಮಸ್ಥರು ತುಪ್ಪ ಖರೀದಿಸಿ ಬಳಕೆ ಮಾಡಿದಾಗ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಗೀತಾರವರು ಇದೇ ತುಪ್ಪದಿಂದ ಆಗಿರಬಹುದೆಂದು ಆತನನ್ನು ಹಿಡಿಯಲು ಕಾಯುತ್ತಿದ್ದರು.
ಮಲ್ಲನಗೌಡಾ ಸೋಮವಾರ ಬೆಳಿಗ್ಗೆ ಮತ್ತೆ ಇಟಗುಳಿಗೆ ತುಪ್ಪ ಮಾರಾಟಮಾಡಲು ಹೋದ ಸಂದರ್ಭದಲ್ಲಿ ಗೀತಾ ಮತ್ತು ಗ್ರಾಮಸ್ಥರು ಆತನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿದ ಆಹಾರ ಸುರಕ್ಷತಾ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಬಂದು ತುಪ್ಪ ನೋಡಿದಾಗ ಅವರು ಕೂಡಾ ಸಂಶಯ ವ್ಯಕ್ತಪಡಿಸಿ ತುಪ್ಪ ಮತ್ತು ತುಪ್ಪಕ್ಕೆ ಬಳಸಿದ ಪರಿಕರಗಳನ್ನು ಪ್ರಯೋಗಾಲಯಕ್ಕೆ ಕಳಿಸಲು ಮುಂದಾಗಿದ್ದಾರೆ.