ಕೊಡಗು: ಕಳೆದ ಕೆಲ ದಿನಗಳ ಹಿಂದೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಪೊಲೀಸರು ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನ ಹತ್ಯೆಗೊಳಗಾಗಿದ್ದ ದುರ್ದೈವಿ. ತೆಲಂಗಾಣ ಮೂಲದ ನಿಹಾರಿಕಾ(29), ಪಶುವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಬಂಧಿತ ಆರೋಪಿಗಳಾಗಿದ್ದಾರೆ.
ಇದೇ ಅಕ್ಟೋಬರ್ 8 ರಂದು ಕೊಡಗಿನ ಸುಂಟಿಕೊಪ್ಪ ಬಳಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೊಡಗು ಪೊಲೀಸರು ಶವದ ಜಾಡು ಹಿಡಿದು ತನಿಖೆ ಆರಂಭಿಸಿದ್ದು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುವ ವೇಳೆ ಸಿಸಿಕ್ಯಾಮೆರಾ ದೃಶ್ಯಾವಳಿಗಳು ಕೆಂಪು ಬಣ್ಣದ ಬೆಂಜ್ ಕಾರೊಂದರ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಬಳಿಕ ಸಿಸಿಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ತೆಲಂಗಾಣ ಮೂಲದ ಆರೋಪಿಗಳು ಆಸ್ತಿಗಾಗಿ ಉದ್ಯಮಿಯನ್ನು ಹತ್ಯೆಗೈದು ಕೊಡಗಿಗೆ ತಂದು ಸುಟ್ಟು ಹಾಕಿ ಪರಾರಿಯಾಗಿದ್ದು ಪತ್ತೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿಹಾರಿಕಾಗೆ 10ನೇ ತರಗತಿಯಲ್ಲಿ ಓದುತ್ತಿರುವಾಗಲೇ ಒಂದು ಮದುವೆಯಾಗಿದ್ದು ಎರಡು ಮಕ್ಕಳಾದ ಮೇಲೆ ಡೈವೋರ್ಸ್ ಸಹ ಆಗಿತ್ತು. ಬಳಿಕ ಅಂಕುರ್ ಎಂಬಾತನ ಪರಿಚಯವಾಗಿದ್ದು ಆತನ ಮೂಲಕ ಆಸ್ತಿಗಾಗಿ ಉದ್ಯಮಿ ರಮೇಶನನ್ನು ಮದುವೆಯಾಗಿದ್ದಳು. ಬಳಿಕ ಪಶುವೈದ್ಯ ನಿಖಿಲ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್ ಆರಂಭಿಸಿದ್ದು ಅಂಕುರ್ ಜೊತೆ ಸೇರಿ ಆಸ್ತಿಯಲ್ಲಿ ಪಾಲು ನೀಡುವಂತೆ ರಮೇಶನಿಗೆ ಪೀಡಿಸುತ್ತಿದ್ದಳು.
ಕೊನೆಗೆ ಆಸ್ತಿ ನೀಡದೇ ಇದ್ದಿದ್ದಕ್ಕೆ ಹೈದರಾಬಾದ್ ಸಮೀಪ ಮೂವರೂ ಸೇರಿ ಹಗ್ಗದಿಂದ ರಮೇಶನ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಬಳಿಕ ಆತನ ಕಾರಿನಲ್ಲೇ ಆತನ ಅಪಾರ್ಟ್‌ಮೆಂಟ್‌ಗೆ ತೆರಳಿ ಹಣ ಆಸ್ತಿ ದಾಖಲೆಗಳನ್ನು ದೋಚಿಕೊಂಡು ನಂತರ ಬೆಂಗಳೂರಿಗೆ ಬಂದಿದ್ದರು. ಬಳಿಕ ಅಲ್ಲಿಂದ ಕೊಡಗಿಗೆ ಆಗಮಿಸಿ ಸುಂಟಿಕೊಪ್ಪ ಬಳಿ ರಮೇಶನ ಮೃತದೇಹವನ್ನು ಸುಟ್ಟುಹಾಕಿ ಪರಾರಿಯಾಗಿದ್ದರು. ಆರೋಪಿಗಳು ಕಾರಿನಲ್ಲಿ ಓಡಾಡಿದ್ದು ಸಿಸಿಕ್ಯಾಮೆರಾಗಳಲ್ಲಿ ಪತ್ತೆಯಾಗಿದ್ದು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.