ಕುಮಟಾ: ತಾಲೂಕಿನ ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಆಪರೇಟರ್ ಮೇಲೆ ಹಂದಿಯೊಂದು ದಾಳಿ ಮಾಡಿದ ಪರಿಣಾಮ ಆಫರೇಟರ್ ಗಂಭೀರ ಗಾಯಗೊಂಡಿದ್ದಾರೆ. ಓರಿಸ್ಸಾ ಮೂಲದ ಮನು ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ತಾಲೂಕಿನ ಮೂರೂರು ಗ್ರಾಪಂ ವ್ಯಾಪ್ತಿಯ ಬೊಗ್ರಿಬೈಲ್ ಕುಡವಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳುತ್ತಿದ್ದ ಜೆಸಿಬಿ ಆಫರೇಟರ್ ಮೇಲೆ ಹಂದಿ ದಾಳಿ ಮಾಡಿದೆ. ಗಂಭೀರ ಗಾಯಗೊಂಡ ಮನು ಅವರನ್ನು ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‌ಗೆ ಸಾಗಿಸಲಾಗಿದೆ.
ಜೆಸಿಬಿ ಆಫರೇಟರ್ ಮೇಲೆ ದಾಳಿ ಮಾಡಿದ ಹಂದಿಯು ಅಲ್ಲಿನ ಸ್ಥಳೀಯ ಮನೆಯೊಂದರ ಬಾವಿಗೆ ಹೋಗಿ ಬಿದ್ದಿದ್ದು, ಆ ಹಂದಿಯನ್ನು ರಕ್ಷಿಸುವ ಕಾರ್ಯ ಕೂಡ ಸ್ಥಳೀಯರ ಜೊತೆಗೂಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿರುವುದಾಗಿ ತಿಳಿದು ಬಂದಿದೆ.