ಹೊಸಪೇಟೆ(ವಿಜಯನಗರ ಜಿಲ್ಲೆ),ಫೆ.15: ವಿಜಯನಗರ ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಹಾಗೂ ಪಟ್ಟಣದ ನಿವೇಶನ ರಹಿತ ಕುಟುಂಬದವರಿಗೆ ನಿವೇಶನಗಳನ್ನು ಒದಗಿಸುವ ಸಲುವಾಗಿ ಆಶ್ರಯ ಯೋಜನೆಗೆ ಕಮಲಾಪುರ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಹಾಗೂ ಪಟ್ಟಣದ ನಿವೇಶನ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಮಲಾಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಕಾದ ದಾಖಲಾತಿಗಳು: ಫಲಾನುಭಾವಿ ಕುಟುಂಬದವರು ಕಡ್ಡಾಯವಾಗಿ ಮಹಿಳೆಯರೇ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ, ಅಲ್ಪಸಂಖ್ಯಾತರು, ಇತರೆ ಹಿಂದುಳಿದ, ಅಂಗವಿಕಲರು, ಮಾಜಿ ಸೈನಿಕರು, ವಿಧುರರು, ಹಿರಿಯ ನಾಗರೀಕರು) ಆಗಿರಬೇಕು. ಮೂಲ ಅರ್ಜಿ ನಮೂನೆ 1 ರಲ್ಲಿ (ಇತ್ತೀಚಿನ ಭಾವಚಿತ್ರ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ/ಪಡಿತರ ಚೀಟಿ/ಆಧಾರ್ ಕಾರ್ಡ್/ಬ್ಯಾಂಕ್ ಪಾಸ್ ಪುಸ್ತಕ, ಸ್ವಂತ ಹೆಸರಿನಲ್ಲಿ ಅಥವಾ ಕುಟುಂಬ ಇತರೆ ಸದಸ್ಯರ ಹೆಸರಿನಲ್ಲಿ ನಿವೇಶನ ಹೊಂದಿಲ್ಲವೆಂದು ಹಾಗೂ ಸರ್ಕಾರದ ಇತರೆ ಯೋಜನೆಗಳನ್ನು ಸೌಲಭ್ಯ ಪಡೆದಿಲ್ಲವೆಂದು ರೂ.20/- ಗಳ ಛಾಪಾ ಕಾಗದದಲ್ಲಿ ಮುಚ್ಛಳಿಕೆ ಪತ್ರ, ಪೌರಕಾರ್ಮಿಕರಾಗಿದ್ದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ದೃಢೀಕರಣ ಪತ್ರ, ಕಮಲಾಪುರ ಪಟ್ಟಣದಲ್ಲಿ ಕನಿಷ್ಠ 5 ವರ್ಷಗಳವರೆಗೆ ವಾಸ ಸ್ಥಳ ದೃಢೀಕರಣ ಪತ್ರ ಸಲ್ಲಿಸಬೇಕು.
ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಫೆ.28ರಂದು ಒಳಗಾಗಿ ಕಛೇರಿಗೆ ಸಲ್ಲಿಸಬೇಕು ಮತ್ತು ತಡವಾಗಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿಯ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.