ಕಾರವಾರ: ದೇಹಕ್ಕೆ ಕಟ್ಟಿಕೊಂಡು ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರಿನ ಅಬಕಾರಿ ಜಂಟಿ ಆಯುಕ್ತರ ಆದೇಶ ಮೇರೆಗೆ ಕಾರವಾರ ಅಬಕಾರಿ ಜಿಲ್ಲಾ ತಂಡ ತಾಲೂಕಿನಲ್ಲಿ ಗಸ್ತು ಮಾಡುತ್ತಿದ್ದ ತಂಡ ಕಾರವಾರ ಬಸ್ ನಿಲ್ದಾಣದಲ್ಲಿ ಶೋಧ ಮಾಡುವಾಗ ಗೋವಾ ಮೂಲದ ಬಸ್ ಸಂಖ್ಯೆ GA 03 X0499 ರಲ್ಲಿ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ಕಂಡು ಬಂದಿದ್ದಾರೆ. ಈ ಹಿನ್ನಲೆ ಅವರನ್ನು ತಪಾಸಣೆ ಮಾಡಿದಾಗ ಕೈ, ಕಾಲುಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಮದ್ಯದ ಬಾಟಲಿ ಕಟ್ಟಿಕೊಂಡು ಸಾಗಿಸುತ್ತಿರುವುದು ಕಂಡುಬಂದಿದೆ.
ಕಾರವಾರದ ಹೈಚರ್ಚ್ ರಸ್ತೆ ನಿವಾಸಿ ಪ್ರವೀಣ ಪಾಂಡುರಂಗ ಗೋಕರ್ಣ ಮತ್ತು ಸೋನಾರವಾಡ ನಿವಾಸಿ ಬಾಬು ರಾಜನ್ ಪಿಳ್ಳೈ ಬಂಧಿತ ಆರೋಪಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ ಸುಮಾರು 65.25 ಲೀ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ. ಮದ್ಯದ ಅಂದಾಜು ಮೌಲ್ಯ 52,400 ರೂ. ಆಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ವಿಜಯ ಮಹಾಂತೇಶ ಲಮಾಣಿ, ಅಬಕಾರಿ ಉಪ ನಿರೀಕ್ಷಕ ನಾಗರಾಜ ಕೊಟ್ಟಿಗಿ, ಅಬಕಾರಿ ಮುಖ್ಯ ಪೇದೆ ಕುಂದಾ ನಾಯ್ಕ, ಅಬಕಾರಿ ಪೇದೆ ಕೃಷ್ಣ ನಾಯ್ಕ ಮತ್ತು ವಾಹನ ಚಾಲಕ ರವೀಂದ್ರ ನಾಯ್ಕ ಇದ್ದರು.