ದಾವಣಗೆರೆ: ಸಾರ್ವಜನಿಕರ ಸಹಕಾರವಿದ್ದರೆ ಮಾನವ ಕಳ್ಳ ಸಾಗಾಣಿಕೆ ತಡೆಯಲು ಸಾಧ್ಯ – ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ: ಗ್ರಾಮ ಮಟ್ಟದಿಂದ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೆ ಎಲ್ಲರೂ ಕೈ ಜೋಡಿಸಿದರೆ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳನ್ನು ಶೂನ್ಯ ಸಂಖ್ಯೆಗೆ ಇಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ಶನಿವಾರ ಜಿಲ್ಲಾಡಳಿತ ಭವನದ…

District Collector ,Shivananda Kapashi vijayaprabha news

ದಾವಣಗೆರೆ: ಗ್ರಾಮ ಮಟ್ಟದಿಂದ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೆ ಎಲ್ಲರೂ ಕೈ ಜೋಡಿಸಿದರೆ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳನ್ನು ಶೂನ್ಯ ಸಂಖ್ಯೆಗೆ ಇಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದಾವಣಗೆರೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಮತ್ತು ಸೆಮಿನಾರ್ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಮತ್ತು ಆರ್ಥಿಕ ಕಾರಣಗಳ ಹಿನ್ನೆಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆಯಂತಹ ದುರ್ಘಟನೆಗಳು ನಡೆಯುತ್ತಿವೆ. ಕಳೆದ ಎರಡು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಜನರು ಕಾಣೆಯಾಗುವ ಘಟನೆಗಳು ಹೆಚ್ಚು ನಡೆಯುತ್ತಿದ್ದವು, ಅದರಲ್ಲಿ ವಿಶೇಷವಾಗಿ ಮಹಿಳೆಯರು ಕಾಣೆಯಾದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಈ ರೀತಿಯ ಕಾಣೆಯಾದ ಮಹಿಳೆಯರ ಕುರಿತು ತನಿಖೆಗಳನ್ನು ನಡೆಸಿದಾಗ ಅವರನ್ನು ಮುಂಬೈ, ಪುಣೆ ಹಾಗೂ ದುಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ, ಸರ್ಕಾರ ಇಂತಹ ಘಟನೆಗಳನ್ನ ನಿಯಂತ್ರಿಸುವ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಗಣನೀಯವಾಗಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಇಳಿಕೆಯಾಗಿವೆ ಎಂದರು.

Vijayaprabha Mobile App free

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಎರಡು-ಮೂರು ಪ್ರಕರಣಗಳು ಮಾತ್ರ ಪತ್ತೆಯಾಗಿವೆ, ಅವುಗಳು ನಿಖರವಾಗಿ ಮಾನವ ಕಳ್ಳ ಸಾಗಣಿಕೆಗೆ ಸಂಬಂಧಿಸಿದ್ದಲ್ಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗುವುದು. ಮಾನವ ಕಳ್ಳ ಸಾಗಣಿಕೆ, ಬಾಲ ಕಾರ್ಮಿಕ ಪದ್ದತಿ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಪ್ರತಿ ಪೊಲೀಸ್ ಠಾಣೆಯಲ್ಲೂ ಇಬ್ಬರು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಮನುಷ್ಯನಿಗೆ ತನ್ನ ಅರಿವೇ ತನ್ನ ಗುರು, ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದನ್ನು ತಾನೇ ಅರಿತುಕೊಳ್ಳಬೇಕು. ಮನುಷ್ಯ ತನ್ನ ಬುದ್ದಿವಂತಿಕೆಯಿಂದ ಬೇರೆ-ಬೇರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅವುಗಳ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮನುಷ್ಯನನ್ನು ಸೇರಿದಂತೆ ಪ್ರಾಣಿ, ವಸ್ತುಗಳ ಅಕ್ರಮ ಸಾಗಣಿಕೆ ನಿಯಂತ್ರಿಸಲು ಹಲವಾರು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಸಮಾಜದಲ್ಲಿ ಮನುಷ್ಯ ಮನುಷ್ಯರಾಗಿ ಜೀವಿಸಲು ಪ್ರಯತ್ನ ಮಾಡಬೇಕು. ಬೇರೆ ಅಕ್ರಮ ಮಾರ್ಗಗಳನ್ನು ಅಳವಡಿಸಿಕೊಳ್ಳದೇ, ಸಮಾಜದಲ್ಲಿ ಅರ್ಥಪೂರ್ಣ ಜೀವನ ನಡೆಸಬೇಕೆಂದರು.

ಸಂಪನ್ಮೂಲ ವ್ಯಕ್ತಿಯಾದ ಎಲ್.ಎಚ್ ಅರುಣ್‍ಕುಮಾರ್ ಅವರು ಉಪನ್ಯಾಸ ನೀಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತಿದ್ದರು ಸಹ ಮಾನವ ಕಳ್ಳ ಸಾಗಾಣಿಕೆಯಂತಹ ಪ್ರಕರಣಗಳನ್ನು ನೋಡುತ್ತಿದ್ದೇವೆ. ಮಾನವ ಕಳ್ಳ ಸಾಗಣಿಕೆ ಎನ್ನುವಂತಹ ಪದವೇ ಭಯ ಹುಟ್ಟಿಸುವುದಾಗಿದೆ. ಸಾಮಾನ್ಯವಾಗಿ ಬಡತನ, ಜಾತಿ ತಾರತಮ್ಯ, ಅಸಮಾನತೆ ಕಾರಣಗಳಿಂದ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ನಡೆಯುತ್ತವೆ. ಈ ಪ್ರಕರಣಗಳಲ್ಲಿ ಶೇ.70 ರಷ್ಟು ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚು ಒಳಪಡಿಸಿ, ಅವರನ್ನು ಅನೈತಿಕ ಚಟುವಟಿಕೆ ಹಾಗೂ ಭಿಕ್ಷಾಟನೆಯಂತಹ ಕಾನೂನು ಬಾಹಿರ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಸಾಮಾಜಿಕ ಅಸಮಾನತೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಬೇತ್ತಲು ಸೇವೆ, ಜೀತ ಪದ್ಧತಿಯಂತಹವುಗಳನ್ನು ಕಾನೂನಿನಡಿ ನಿಷೇಧಿಸಿ ನಿರ್ಮೂಲನೆ ಮಾಡಲಾಗಿದೆ. ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳ ಜೊತೆ ಸಂಘಟನೆಗಳು ಪಾಲ್ಗೊಂಡು ಜನರಲ್ಲಿ ಕಳ್ಳ ಸಾಗಣಿಕೆ ತಡೆಯ ಬಗ್ಗೆ ಜಾಗೃತಿ ಮೂಡಿಸಿದರೆ, ಮಾನವ ಕಳ್ಳ ಸಾಗಣಿಕೆಯನ್ನು ತಡೆಗಟ್ಟಬಹುದಾಗಿದೆ ಎಂದರು. ಇದೇ ವೇಳೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ, ಡಿಡಿಪಿಐ ತಿಪ್ಪೇಶಪ್ಪ, ಆರೋಗ್ಯ ಇಲಾಖೆಯ ಡಾ.ರೇಣುಕಾರಾಧ್ಯ, ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ನಜ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ, ವಕೀಲರಾದ ಎನ್.ಎಮ್ ಆಂಜನೇಯ, ಶಶಿಧರ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.