ಹೊಸಪೇಟೆ(ವಿಜಯನಗರ): ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಡಿ.ದೇವರಾಜ ಅರಸು ಪ್ರಶಸ್ತಿ ನೀಡಲು ತೀರ್ಮಾಸಿದ್ದು, ಅರ್ಹರನ್ನು ಆಯ್ಕೆಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎನ್.ಮಹೇಶ್ಬಾಬು ಅವರು ತಿಳಿಸಿದ್ದಾರೆ.
ಆಯ್ಕೆ ಸಮಿತಿ ವಿವರ: ಸಮಿತಿಯ ಅಧ್ಯಕ್ಷರಾಗಿ ವಿಜಯನಗರ ಜಿಲ್ಲಾಧಿಕಾರಿಗಳು, ಉಪಾಧ್ಯಕ್ಷರಾಗಿ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಸದಸ್ಯರಾಗಿ ಜಿಲ್ಲಾಧಿಕಾರಿಗಳಿಂದ ನಾಮ ನಿರ್ದೇಶಿತರು, ಜಿಲ್ಲಾ ವಾರ್ತಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಜಂಟಿ/ಉಪ ನಿರ್ದೇಶಕರು, ಸದಸ್ಯ ಕಾರ್ಯದರ್ಶಿಗಳಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸಮಿತಿಯಲ್ಲಿ ಕಾರ್ಯನಿರ್ವಹಿಸಿಲಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿನ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಯವರು ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪಡೆಯಲು ಆಸಕ್ತರು ತಾವು ಮಾಡಿದ ಕಾರ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಆ.16ರೊಳಗಾಗಿ ಸಲ್ಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ಆ.20ರಂದು ನಡೆಯುವ ವೇದಿಕೆ ಸಮಾರಂಭದಲ್ಲಿ ರೂ.50ಸಾವಿರ ನಗದು ಬಹುಮಾನ ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೇವರಾಜ ಅರಸು ಪುಶಸ್ತಿ ಆಯ್ಕೆಗೆ ಮಾನದಂಡಗಳು:
ದೇವರಾಜ ಅರಸು ಪ್ರಶಸ್ತಿಗೆ ಪ್ರಸ್ತಾಪಿಸಲ್ಪಡುವ ವ್ಯಕ್ತಿಯು ದೇವರಾಜ ಅರಸು ಅವರ ಧೇಯೋದ್ದೇಶಗಳನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯ ನಿರತರಾಗಿರಬೇಕು. ಡಿ. ದೇವರಾಜ ಅರಸುರವರು ಕಾರ್ಯಗತಗೊಳಿಸಿದ ಯೋಜನೆ/ಕಾರ್ಯಕ್ರಮಗಳಲ್ಲಿ ಕನಿಷ್ಠ ಒಂದೆರಡರಲ್ಲಿಯಾದರೂ ಸ್ವಯಂ ಪ್ರೇರಣೆಯಿಂದ ತಮ್ಮನ್ನು ತೊಡಗಿಸಿಕೊಂಡು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರಬೇಕು.
ಹಿಂದುಳಿದ ವರ್ಗಗಳನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರಬೇಕು ಹಾಗೂ ಮೀಸಲಾತಿ/ಶಿಕ್ಷಣ/ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿರಬೇಕಾಗಿದ್ದು, ಹಿಂದುಳಿದ ವರ್ಗಗಳ ಶಿಕ್ಷಣ/ಆರ್ಥಿಕ ಅಭಿವೃದ್ಧಿ/ಔದ್ಯೋಗಿಕ ಕ್ಷೇತ್ರಗಳಲ್ಲಿ ಕಾರ್ಯನಿರತನಾಗಿದ್ದು, ಈ ಸಂಬಂಧ ಅವರ ಕೊಡುಗೆ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಗುರುತಿಲ್ಪಟ್ಟಿರಬೇಕು. ಹಿಂದುಳಿದ ವರ್ಗಗಳ ಅತ್ಯಂತ ಹಿಂದುಳಿದ ಜನಾಂಗವನ್ನು ಮುಖ್ಯವಾಹಿನಿಗೆ ತರಲು ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಶ್ರಮಿಸುತ್ತಿರಬೇಕು ಎಂದು ಅವರು ತಿಳಿಸಿದ್ದಾರೆ.