ಉಪವಾಸ ಅಹಿಂಸೆಯ ಮೂಲಕ ಮಾತ್ರವಲ್ಲದೆ ರಕ್ತ ಕ್ರಾಂತಿಯ ಹೋರಾಟದ ಮೂಲಕವು ಸ್ವಾತಂತ್ರ್ಯ ದೊರೆತಿದೆ: ವ್ಯಂಗ್ಯ ಚಿತ್ರಕಾರ ಹೆಚ್.ಬಿ ಮಂಜುನಾಥ್

Cartoonist HB Manjunath vijayaprabha news Cartoonist HB Manjunath vijayaprabha news

ದಾವಣಗೆರೆ ಜ.25: ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಾವಣಗೆರೆಯಲ್ಲಿಯೂ ಕೂಡ ಅನೇಕ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಒಂದು ಅಗಳು ಅನ್ನದ ಹಿಂದೆ ಅನೇಕ ಜನ ರೈತ-ಕಾರ್ಮಿಕರ ಶ್ರಮ ಇರುತ್ತದೆ. ಅಂತೆಯೇ ಈಗ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ದಿನಗಳ ಹಿಂದೆ ಅನೇಕ ಮಹನೀಯರ ತ್ಯಾಗ ಬಲಿದಾನ ಹೋರಾಟದ ಶ್ರಮವಿದೆ. ಕೇವಲ ಉಪವಾಸ ಅಹಿಂಸೆಯ ಮೂಲಕ ಮಾತ್ರವಲ್ಲದೆ ರಕ್ತ ಕ್ರಾಂತಿಯ ಹೋರಾಟದ ಮೂಲಕವು ಸ್ವಾತಂತ್ರ್ಯ ದೊರೆತಿದೆ ಎಂದು ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್.ಬಿ ಮಂಜುನಾಥ್ ಹೇಳಿದರು.

ಮಂಗಳವಾರ ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಚರಿಸುತ್ತಿರುವ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇವನಗರಿಯ ಕೊಡುಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು.

ಇತಿಹಾಸ ತಿಳಿಯದೆ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬ ನುಡಿಗಟ್ಟಿನಂತೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಾವಣಗೆರೆಯಲ್ಲಿಯೂ ಕೂಡ ಅನೇಕ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಒಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ದಾವಣಗೆರೆಯ ಕೊಡುಗೆಗಳು ಕೂಡ ಅಗಾಧವಾಗಿವೆ. 1920 ಅಷ್ಟೊತ್ತಿಗೆ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯನ್ನು ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರು ತಮ್ಮ ಧನುರ್ಧಾರಿ ಪತ್ರಿಕೆಯ ಮೂಲಕ ದಾವಣಗೆರೆಯಲ್ಲಿ ರೂಪಿಸಿದ್ದರು. ಧಾರವಾಡದ ಮೃತ್ಯುಂಜಯಪ್ಪ ನವರ ಜೊತೆಗೂಡಿ ಭಾರತ ರಾಷ್ಟ್ರೀಯತೆ ಎಂಬ ಪತ್ರಿಕೆಯ ಮೂಲಕವೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

Advertisement

ಅಂಕೋಲಾ ಮತ್ತು ಕಾರವಾರ ಚಳುವಳಿಯ ಪ್ರಭಾವದಿಂದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿಕೊಂಡರು. 1932 ರಲ್ಲಿ ವಿದೇಶಿ ವಸ್ತುಗಳನ್ನು ಮತ್ತು ಇಂಗ್ಲೆಂಡಿನಿಂದ ತಯಾರಾಗಿ ಬಂದಂತಹ ಬಟ್ಟೆಗಳನ್ನು ಕಾಯಿಪೇಟೆಯ ಬಳಿ ಹೋಳಿ ದಿನದಂದು ಸುಡುವ ಮುಖಾಂತರ ಸ್ವದೇಶಿ ಚಳುವಳಿಗೆ ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ್ದರು. ಕಾಸಲ್ ಶ್ರೀನಿವಾಸ್ ಶೆಟ್ಟಿ ಅವರು ಮಹಾತ್ಮ ಗಾಂಧಿಯವರಿಗೆ ಪತ್ರ ಬರೆದು ಅವರನ್ನು ದಾವಣಗೆರೆ ಕರೆತರುವ ಮೂಲಕ ಸ್ವಾತಂತ್ರ ಚಳುವಳಿಗೆ ಮತ್ತಷ್ಟು ಸ್ಪೂರ್ತಿ ತುಂಬಿದರು. ಗಾಂಧೀಜಿಯವರ ಭೇಟಿಯಿಂದ ದೊಡ್ಡಮಟ್ಟದಲ್ಲಿ ಹೋರಾಟಗಳು ಶುರುವಾದವು. ಇಂತಹ ಹೋರಾಟಗಳಲ್ಲಿ ಜಾತಿ-ಮತಭೇದವಿಲ್ಲದೆ ಅನೇಕ ಜನರು ಶಿಕ್ಷೆಗೆ ಒಳಗಾಗಿದ್ದಾರೆ. 1942 ರ ಭಾರತ ಬಿಟ್ಟು ತೊಲಗಿ ಚಳವಳಿಗೆ ಯುವಕರು ವಿದ್ಯಾರ್ಥಿಗಳು ಕೂಡ ಬಹುದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಧಾವಿಸಿದ್ದರು ಎಂದು ಮಾಹಿತಿ ನೀಡಿದರು.

ಸ್ವತಂತ್ರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶ ಇಲ್ಲದೆ ಹೋದರೆ ಯಾವುದೇ ಸಮಾಜ, ಸಂಸಾರ, ವ್ಯಕ್ತಿ, ವ್ಯವಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಜಗತ್ತಿನ ಎಲ್ಲಾ ಆಧ್ಯಾತ್ಮಿಕ ಸಾಹಿತ್ಯಗಳಿಗಿಂತಲೂ ಮೊದಲು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರವನ್ನು ನಮ್ಮ ವೇದ ಶಾಸ್ತ್ರ ಪುರಾಣ ಉಪನಿಷತ್ತುಗಳಲ್ಲಿ ತಿಳಿಸಲಾಗಿದೆ. ಸುಮಾರು ಎರಡು ನೂರು ವರ್ಷಗಳ ಕಾಲ ಭಾರತವು ಪರಕೀಯರ ಬಿಗಿಮುಷ್ಠಿಯಲ್ಲಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳದೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಪರತಂತ್ರದ ಆಳ್ವಿಕೆಯಿಂದ ಹೊರಬರುವ ಮಾರ್ಗವಾಗಿ ರೂಪಿತವಾದದ್ದೇ ಭಾರತದ ಸ್ವಾತಂತ್ರ್ಯ ಚಳುವಳಿ.

ನಮ್ಮ ಮನೆಯೊಳಗೆ ಯಾವುದೇ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಿದ್ದರು ಕೂಡ ನಾವು ಹೊರಗಡೆ ಭಾರತೀಯರಾಗಿರಬೇಕು. ಏಕೆಂದರೆ ಭಾರತ ಅನೇಕ ಧರ್ಮ-ಜಾತಿ ಭಾಗಗಳನ್ನು ಒಳಗೊಂಡಿರುವ ನೈಜ ಪ್ರಜಾಪ್ರಭುತ್ವ ದೇಶ. ಗಲ್ಫ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಸ್ವತಂತ್ರ ಇಲ್ಲ ಅವುಗಳು ಮತಾಂಧ ರಾಷ್ಟ್ರಗಳು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲ. ಆದರೆ ಭಾರತದಲ್ಲಿ ಎಲ್ಲಾ ಧರ್ಮ ಜಾತಿಗಳಿಗೂ ಕೂಡ ಸ್ವತಂತ್ರವಿದೆ ನಿಜವಾದ ಸ್ವಾತಂತ್ರ್ಯವನ್ನು ಭಾರತೀಯರು ಅನುಭವಿಸಿ ಬದುಕುತ್ತಿದ್ದಾರೆ ಎಂದರು.

ಬ್ರಿಟಿಷರ ಆಳ್ವಿಕೆಯ ಕಾಲಮಾನದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಪ್ರವಾಸಿ ತಾಣಗಳು ಇದ್ದರೂ ಬ್ರಿಟಿಷರು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಿಲ್ಲ ಏಕೆಂದರೆ ಬ್ರಿಟನ್ ಮಾತ್ರ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಸಾಧಿಸಬೇಕೆಂಬುದು ಅವರ ನಿಲುವಾಗಿತ್ತು. ಇಂತಹ ಅನೇಕ ದಬ್ಬಾಳಿಕೆಯಿಂದ ಕೊನೆಗೆ ಭಾರತ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಉದ್ಘಾಟನೆಯ ನುಡಿಗಳನ್ನಾಡಿದ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರು ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಈಗಾಗಲೇ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದಿದರೆ ಆ ಪ್ರದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತವೆ. ಸರ್ಕಾರದ ಗಮನಕ್ಕೆ ಬಾರದ ಇರುವ ಪ್ರವಾಸಿ ತಾಣಗಳನ್ನು ಜನಸಾಮಾನ್ಯರು ಗುರುತಿಸಿ ಅವುಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರೆ ಅಭಿವೃದ್ಧಿಪಡಿಸಲಾಗುವುದೆಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ರಾಷ್ಟ್ರ ಮಟ್ಟದಲ್ಲಿ ಪ್ರವಾಸಿ ದಿನವನ್ನು ಆಚರಿಸುತ್ತಿದೆ. ಈ ದಿನದ ಉದ್ದೇಶ ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸಿ ಪ್ರವಾಸಿಗರನ್ನು ಆಕರ್ಷಿಸುವುದಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸುಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಇದೇ ವೇಳೆ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ತಿಪ್ಪಣ್ಣ.ಎ.ಕುಸಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಕ್ಸ್ ಮುನಿಪಲ್ ಪಿಯು ಕಾಲೇಜಿನ ಪ್ರಾಚಾರ್ಯ ಸುರೇಶ್, ಚಿತ್ರಗಿ ಶಿವಕುಮಾರ್, ರಾಜಶೇಖರ್ ರಫೀಕ್ ಉಪಸ್ಥಿತರಿದ್ದರು. ಉಪಸ್ಯಾಸಕರಾದ ಮಂಜಪ್ಪ ಹಿತ್ತಲಮನಿ ಸ್ವಾಗತಿಸಿದರೆ, ಅನ್ನಪೂರ್ಣ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಹಾಜರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement